ಕೊಚ್ಚಿ: ಸದಾ ವಿವಾದಗಳ ಸುಳಿಯಲ್ಲೇ ಇರುವ ʻದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಭಾಗಕ್ಕೆ ಬಿಡುಗಡೆಯ ಹಿಂದಿನ ದಿನವೇ ದೊಡ್ಡ ಆಘಾತ ಎದುರಾಗಿದೆ. “ಕೇರಳದಲ್ಲಿ ಇಂತಹ ಘಟನೆಗಳು ಸರ್ವೇ ಸಾಮಾನ್ಯ” ಎಂಬ ವಿವಾದಾತ್ಮಕ ಚಿತ್ರಣ ನೀಡಲು ಹೊರಟಿದ್ದ ‘ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಸಿನಿಮಾದ ಹಾದಿಗೆ ಕೇರಳ ಹೈಕೋರ್ಟ್ ಅಡ್ಡಗೋಡೆಯಾಗಿ ನಿಂತಿದೆ. ಗುರುವಾರ ಈ ಬಗ್ಗೆ ಆದೇಶ ನೀಡಿರುವ ನ್ಯಾಯಾಲಯವು ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆ ನೀಡಿದೆ.

ನ್ಯಾಯಾಲಯದ ಕೆಂಗಣ್ಣು:
ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಈ ಚಿತ್ರಕ್ಕೆ ನೀಡಿರುವ ಪ್ರಮಾಣಪತ್ರವನ್ನು ಮರುಪರಿಶೀಲಿಸುವಂತೆ ಸೆನ್ಸಾರ್ ಮಂಡಳಿಗೆ (CBFC) ಸೂಚಿಸಿದ್ದಾರೆ. ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯ, “ಕೇರಳ ರಾಜ್ಯವು ಸೌಹಾರ್ದತೆಯಿಂದ ಬದುಕುತ್ತಿದೆ. ಆದರೆ ಈ ಚಿತ್ರವು ಅಹಿತಕರ ಘಟನೆಗಳು ರಾಜ್ಯಾದ್ಯಂತ ಹರಡಿವೆ ಎಂಬ ತಪ್ಪು ಸಂದೇಶ ನೀಡುವಂತಿದೆ” ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಇದು ಜನರಲ್ಲಿ ಭಾವೋದ್ರೇಕ ಉಂಟುಮಾಡುವ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡುವ ಅಪಾಯವಿದೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.

ಪ್ರೊಡ್ಯೂಸರ್ ತಿರಸ್ಕಾರ ಮತ್ತು ಅರ್ಜಿದಾರರ ವಾದ:
ಚಿತ್ರವನ್ನು ಖುದ್ದಾಗಿ ವೀಕ್ಷಿಸಲು ನ್ಯಾಯಾಲಯ ಮುಂದಾಗಿದ್ದರೂ, ಚಿತ್ರದ ನಿರ್ಮಾಪಕರು ಆ ಆಫರ್ ಅನ್ನು ನಿರಾಕರಿಸಿದ್ದಾರೆ. ಈ ನಡುವೆ ಅರ್ಜಿದಾರರು, “ಚಿತ್ರದ ಶೀರ್ಷಿಕೆಯಲ್ಲಿ ʻಕೇರಳ’ ಎಂಬ ಪದ ಬಳಸಿ ಇಡೀ ರಾಜ್ಯವನ್ನು ಮತ್ತು ಮಲಯಾಳಿಗಳನ್ನು ಭಯೋತ್ಪಾದನೆಯ ಜೊತೆ ತಳುಕು ಹಾಕುವುದು ಸರಿಯಲ್ಲ. ಇದು ಕೇರಳದ ಘಟನೆಯೇ ಅಲ್ಲದಿದ್ದರೂ ರಾಜ್ಯಕ್ಕೆ ಕಳಂಕ ತರುವ ಉದ್ದೇಶ ಹೊಂದಿದೆ” ಎಂದು ವಾದಿಸಿದ್ದಾರೆ. ಈ ಹಿಂದಿನ ʻದಿ ಕೇರಳ ಸ್ಟೋರಿ’ ಬಿಡುಗಡೆಯಾದಾಗಲೂ ಮಲಯಾಳಿಗಳ ವಿರುದ್ಧ ದೇಶ-ವಿದೇಶಗಳಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗಿತ್ತು ಎಂಬುದನ್ನು ಅರ್ಜಿದಾರರು ನೆನಪಿಸಿದ್ದಾರೆ.
