ಮಂಗಳೂರು: ಮಂಗಳೂರಿನ ಕದ್ರಿ ವ್ಯಾಪ್ತಿಯ ‘ಡಾಕ್ಟರ್ಸ್ ಲೇನ್’ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ʻಆಪರೇಷನ್ ಕೈಬಟ್ಟಲುʼ ಶುರು ಮಾಡಿದೆ. ಕೈಬಟ್ಟಲು ಪ್ರದೇಶದ ನಾಗಬನದ ಹತ್ತಿರ ಬೃಹತ್ ಬೋನನ್ನು ಇರಿಸಲಾಗಿದ್ದು, ಚಿರತೆಯನ್ನು ಆಕರ್ಷಿಸಲು ಬೋನಿನ ಪಕ್ಕದಲ್ಲೇ ಎರಡು ಜೀವಂತ ಕೋಳಿಗಳನ್ನು ‘ಬಲಿ’ಯಾಗಿ ಇರಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮೂರು ತಂಡಗಳಾಗಿ ವಿಭಜನೆಗೊಂಡು ರಾತ್ರಿಯಿಡೀ ಹದ್ದಿನ ಕಣ್ಣಿಟ್ಟಿದ್ದಾರೆ.

ಅಧಿಕಾರಿಗಳ ಪ್ರಕಾರ, ಚಿರತೆಗಳು ಒಂದೇ ಕಡೆ ಬೀಡುಬಿಡುವ ಪ್ರಾಣಿಗಳಲ್ಲ. ಇವು ಅಲೆಮಾರಿಗಳು. ಒಂದೇ ರಾತ್ರಿಯಲ್ಲಿ 15 ರಿಂದ 20 ಕಿಲೋಮೀಟರ್ ದೂರ ಕ್ರಮಿಸಬಲ್ಲ ಈ ಮೃಗಗಳು, ಎಲ್ಲಿ ಸುಲಭವಾಗಿ ಆಹಾರ ಸಿಗುತ್ತದೆಯೋ ಅಲ್ಲಿಗೆ ನುಗ್ಗುತ್ತವೆ. ಮಂಗಳೂರಿನ ರಸ್ತೆ ಬದಿಯಲ್ಲಿ ನಾವು ಎಸೆಯುವ ಮಾಂಸದ ತ್ಯಾಜ್ಯ ಮತ್ತು ಬೀದಿನಾಯಿಗಳೇ ಈ ಚಿರತೆಗೆ ಪಂಚಭಕ್ಷ್ಯ ಪರಮಾನ್ನ! ಈಗ ಸಂತಾನೋತ್ಪತ್ತಿಯ ಕಾಲವಾದ್ದರಿಂದ ಈ ಮೃಗಗಳು ಅತೀ ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ. ಚಿರತೆ ಸಾಮಾನ್ಯವಾಗಿ ಮನುಷ್ಯರನ್ನು ಬೇಟೆಯಾಡುವುದಿಲ್ಲ ನಿಜ, ಆದರೆ ಹಸಿವಿನಿಂದ ಕಂಗಾಲಾಗಿರುವ ಈ ಮೃಗದ ಎದುರು ಒಂಟಿಯಾಗಿ ಸಿಕ್ಕರೆ ಏನೂ ಬೇಕಾದರೂ ಆಗಬಹುದು.
ಕದ್ರಿಯ ಕಾಂಕ್ರೀಟ್ ಕಾಡಿನಲ್ಲಿ ನರಭಕ್ಷಕನ ನಿಶಬ್ದ ಸಂಚಾರ: ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆ ನಡಿಗೆ

ಮಂಗಳೂರಿಗರೇ ಎಚ್ಚರ:
ಕದ್ರಿಯ ಜನವಸತಿ ಪ್ರದೇಶದಲ್ಲಿ ಚಿರತೆ ಓಡಾಡುತ್ತಿದೆ ಎಂದರೆ ಅದು ನಿಮ್ಮ ಮನೆ ಬಾಗಿಲಿಗೂ ಬರಬಹುದು. ನಿಮ್ಮ ಸಾಕು ನಾಯಿಗಳು ಮತ್ತು ಸಣ್ಣ ಮಕ್ಕಳ ಮೇಲೆ ನಿಗಾ ಇರಲಿ. ರಸ್ತೆ ಬದಿಯಲ್ಲಿ ಮಾಂಸದ ತ್ಯಾಜ್ಯ ಎಸೆಯುವ ಮೂಲಕ ಈ ಮೃತ್ಯುದೂತನನ್ನು ಆಹ್ವಾನಿಸಬೇಡಿ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
