ತಾಯಿಯ ಮುಂದೆಯೇ ರೌಡಿಶೀಟರ್‌ ಮಗನ ಬರ್ಬರ ಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿಯ ಥಣಿಸಂದ್ರದ ಅಮರಜ್ಯೋತಿ ಲೇಔಟ್ ಒಂದು ಭೀಕರ ರಕ್ತಪಾತಕ್ಕೆ ಸಾಕ್ಷಿಯಾಗಿದೆ. ಡಿಜೆ ಹಳ್ಳಿಯ ರೌಡಿಶೀಟರ್, 25 ವರ್ಷದ ಪವನ್ ಕುಮಾರ್ ಎಂಬ ಯುವಕನನ್ನು ಆತನ ಹೆತ್ತ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಕೊಚ್ಚಿ ಹಾಕಿದ್ದಾರೆ. ಮಗನನ್ನು ಉಳಿಸಿಕೊಳ್ಳಲು ತಾಯಿಹಾಕಿದ ಚೀರಾಟ ಅಮರಜ್ಯೋತಿ ಲೇಔಟ್‌ನ ಗೋಡೆಗಳಿಗೆ ಬಡಿದು ಮೌನವಾಯಿತೇ ಹೊರತು, ಹಂತಕರ ಎದೆಯಲ್ಲಿ ಕಿಂಚಿತ್ತೂ ಕರುಣೆ ಹುಟ್ಟಿಸಲಿಲ್ಲ.

ಈ ಕೊಲೆಯ ಹಿಂದೆ ಇರುವುದು ಅಪ್ಪಟ ಸೇಡಿನ ಕಿಚ್ಚು. ಕಥೆ ಶುರುವಾಗುವುದು ಮೂರು ವರ್ಷಗಳ ಹಿಂದೆ. ಜುಲೈ 11, 2023 ರಂದು ಡಿಜೆ ಹಳ್ಳಿ ಮಣ್ಣಿನಲ್ಲಿ ಕಪಿಲ ಎಂಬಾತನ ಮುಂಡ ತುಂಡಾಗಿತ್ತು. ಆವತ್ತು ಕಪಿಲನನ್ನು ಮುಗಿಸಲು ಹಂತಕರು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಬಂದಿದ್ದರು. ಕಾಕತಾಳೀಯವೆಂಬಂತೆ ಆ ಕೇಸಿನಲ್ಲಿ A5 ಆರೋಪಿಯಾಗಿದ್ದ ಪವನ್ ಕುಮಾರ್‌ನನ್ನು ಮುಗಿಸಲು ಕೂಡ ಹಂತಕರು ಸ್ಕೆಚ್ ಹಾಕಿದ್ದರು!

ಇದೀಗ ಅವರೇ ಮೂರು ಬೈಕುಗಳಲ್ಲಿ ಬಂದ ಆರು ಜನ ಕಿರಾತಕರು, ಹೆಲ್ಮೆಟ್ ಧರಿಸಿ ಮುಖ ಮುಚ್ಚಿಕೊಂಡು ಪವನ್ ಮನೆ ಬಳಿಯೇ ಹೊಂಚು ಹಾಕಿ ಈ ʻರಿವೆಂಜ್’ ಗೇಮ್ ಆಡಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕುಮಾರ್ ಕಳೆದ ಮೇ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಮಗ ರೌಡಿಸಂ ಸಹವಾಸ ಬಿಟ್ಟು ಸುಧಾರಿಸಲಿ ಎಂದು ತಾಯಿ ಆಸೆಪಟ್ಟಿದ್ದರು. ಅದಕ್ಕಾಗಿಯೇ ಒಂದೂವರೆ ತಿಂಗಳ ಹಿಂದೆ ಮನೆ ಹತ್ತಿರವೇ ಒಂದು ಬೇಕರಿ ಇಟ್ಟುಕೊಟ್ಟಿದ್ದರು. ಆದರೆ, ವೈರಿಗಳ ಕಣ್ಣು ಈತನ ಮೇಲೆ ಸದಾ ಇತ್ತು. “ಅಮ್ಮ, ಪ್ರೇಮ್ ಎನ್ನುವವನು ನನ್ನ ಫಾಲೋ ಮಾಡ್ತಿದ್ದಾನೆ, ನನ್ನ ಮುಗಿಸಲು ಪ್ಲಾನ್ ಮಾಡಿದ್ದಾನೆ” ಎಂದು ಪವನ್ ತನ್ನ ತಾಯಿ ಬಳಿ ಮೊದಲೇ ಆತಂಕ ತೋಡಿಕೊಂಡಿದ್ದ. ಆ ದಿಗಿಲು ಕೊನೆಗೂ ನಿಜವಾಯ್ತು. ಕಪಿಲನ ತಮ್ಮ ಪ್ರೇಮ್ ಅಂಡ್ ಟೀಮ್ ಈ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ಈಗ ಪೊಲೀಸರಿಗಿದೆ.

ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳು ಬಲೆ ಬೀಸಿವೆ.

error: Content is protected !!