
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ ಮೂಲದ 8 ಮಂದಿ ಅಂತರ್‌ರಾಜ್ಯ ದರೋಡೆಕೋರರ ತಂಡವನ್ನು ಯಲ್ಲಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಕೈಚಳಕ ತೋರಿಸಲು ಈ ಗ್ಯಾಂಗ್ ಹೊಂಚು ಹಾಕಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಇಂದು ನಸುಕಿನ ಜಾವ 5:30 ರ ಸುಮಾರಿಗೆ, ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಕೆ. ಮಿಲನ್ ಹೋಟೆಲ್ ಬಳಿ ತಂಡವೊಂದು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಅವರ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಸುತ್ತುವರೆದು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬಂಧಿತರೆಲ್ಲರೂ ಮಹಾರಾಷ್ಟ್ರದ ಪುಣೆ ಮತ್ತು ಥಾಣೆ ಮೂಲದವರಾಗಿದ್ದಾರೆ. ಇವರನ್ನು ಪುಣೆಯ ಉಮೇಶ ರಾಮಾ ಗಾಯಕವಾಡ (35), ಲಖನ್ ಸುಹಾಸ್ ಜಾದವ (30), ಪ್ರಶಾಂತ ಅಖಿಲ್ ಪವಾರ (35), ಹಾಗೂ ಥಾಣೆಯ ಶ್ರೀನಾಥ ಶಂಕರ ಜಾದವ (39), ದೀಪಕ ಚಂದರಲಾಲ್ ದುಂಬಾನಿ (47), ಸುಂದರ ಕೈಲಾಸ್ ಗಾಯಕವಾಡ (50), ನಾಗುಬಾಯಿ ಗಣೇಶ ಜಾದವ (60) ಮತ್ತು ಅಂಬಿಕಾ ಪ್ರಕಾಶ ಜಾದವ (39) ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಕೈಕಡಿ ಸಮುದಾಯಕ್ಕೆ ಸೇರಿದ ಈ ಗ್ಯಾಂಗ್, ಕಳೆದ 3-4 ವರ್ಷಗಳಿಂದ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು, ಪ್ರವಾಸಿ ತಾಣಗಳು ಮತ್ತು ಜಾತ್ರೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿತ್ತು. ಜನಸಂದಣಿ ಇರುವ ಪ್ರದೇಶಗಳಲ್ಲಿ ಪಿಕ್ ಪಾಕೇಟ್, ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಬಳೆ ಕಳ್ಳತನ ಮಾಡುವುದರಲ್ಲಿ ಇವರು ನಿಸ್ಸೀಮರು. ಕೃತ್ಯ ಎಸಗಿ ತಮ್ಮದೇ ವಾಹನದಲ್ಲಿ ಪರಾರಿಯಾಗುವ ಇವರು, ಸಾರ್ವಜನಿಕರು ಹಿಡಿಯಲು ಬಂದರೆ ಕಲ್ಲಿನಿಂದ ಹಲ್ಲೆ ನಡೆಸುವ ಕ್ರೂರ ಸ್ವಭಾವ ಹೊಂದಿದ್ದಾರೆ. ಈ ಹಿಂದೆಯೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಮುರ್ಡೇಶ್ವರದಲ್ಲಿ ಕಳ್ಳತನ ಮಾಡಿರುವ ಬಗ್ಗೆ ಯಲ್ಲಾಪುರ ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಾರುತಿ ಎರ್ಟಿಗಾ ಕಾರು, ನಾಲ್ಕು ಕಬ್ಬಿಣದ ರಾಡ್‌ಗಳು, ಒಂದು ಖಾರದ ಪುಡಿ ಪ್ಯಾಕೆಟ್, ನಾಲ್ಕು ಮಂಕಿ ಕ್ಯಾಪ್‌ಗಳು ಹಾಗೂ ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. (ಐಪಿಎಸ್), ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಮತ್ತು ಜಗದೀಶ ಎಂ.ಎನ್., ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಯಲ್ಲಾಪುರ ಸಿಪಿಐ ರಮೇಶ ಹನಾಪೂರ, ಗೋಕರ್ಣ ಸಿಪಿಐ ಶ್ರೀಧರ ಎಸ್.ಆರ್. ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಅನಿಲ್ ಮಾದರ, ಮಹಾಂತೇಶ ಕುಂಬಾರ, ಎಎಸ್ಐ ಗಜಾನನ ನಾಯ್ಕ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಮತ್ತು ಕಾರವಾರದ ಟೆಕ್ನಿಕಲ್ ಸೆಲ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದರು.