ಬೆಂಗಳೂರು: ಇಳಿಜಾರಿನಲ್ಲಿ ಖಾಸಗಿ ಶಾಲಾ ಬಸ್ಸೊಂದು ಬ್ರೇಕ್ ಫೇಲ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸೋಮವಾರ ಬೆಳಗ್ಗೆ ಖಾಸಗಿ ಬಸ್ ಮಹಾಲಕ್ಷ್ಮೀ ಲೇಔಟ್‌ನ 3ನೇ ಅಡ್ಡರಸ್ತೆಯಲ್ಲಿ ಮಕ್ಕಳನ್ನು ಕರೆದೊಯ್ಯಲು ಬಂದಿದ್ದು, ಈ ವೇಳೆ ಇಳಿಜಾರಿನಲ್ಲಿ ಏಕಾಏಕಿ ಬಸ್‌ನ ಬ್ರೇಕ್ ಫೇಲ್ ಆಗಿದೆ. ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಆ ನಂತರ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಪವಾಡ ಸದೃಶ ರೀತಿಯಲ್ಲಿ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಘಟನೆಯ ಬಗ್ಗೆ ಶಾಸಕ ಕೆ.ಗೋಪಾಲಯ್ಯ ಪ್ರತಿಕ್ರಿಯಿಸಿ, ಬಸ್ ಅವಘಡ ನಡೆದಿದೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ. ದಿಬ್ಬ ಹತ್ತುವಾಗ ಬಸ್‌ನ ಬ್ರೇಕ್ ಫೇಲ್ ಆಗಿ, ಹಿಂದಕ್ಕೆ ಬಸ್ ನುಗ್ಗಿದೆ. ಎಲ್ಲಾ ಬಸ್‌ಗಳು ಕಂಡಿಷನ್‌ನಲ್ಲಿರಬೇಕು ಎಂದು ಎಲ್ಲಾ ಶಾಲೆಗಳಿಗೂ ಸೂಚನೆ ನೀಡುತ್ತೇನೆ. ದೊಡ್ಡ ಅನಾಹುತ ಆಗಬೇಕಾಗಿತ್ತು. ಆದರೆ ದೇವರ ಕೃಪೆಯಿಂದ ಸ್ವಲ್ಪದರಲ್ಲಿ ಅನಾಹುತ ತಪ್ಪಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
