ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್(ಗ್ರಾಮಾಂತರ) ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ (ಗ್ರಾಮಾಂತರ) ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದ್ದು, ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಎ. ಅಸ್ಮ ಹಸೈನಾರ್ ಹಾಗೂ ಸವಿತಾ ಬರ್ಕಳ ಕೊಳ್ನಾಡು ಅವರನ್ನು ನೇಮಕ ಮಾಡಲಾಗಿದೆ. ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಬ್ಬರು ನೂತನ ಪದಾಧಿಕಾರಿಗಳಿಗೆ ಅಧಿಕೃತವಾಗಿ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.

ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯೆಯಾಗಿ ಮತ್ತು ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಕೆ.ಎ. ಅಸ್ಮ ಹಸೈನಾರ್ ಅವರು, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ತಮ್ಮ ಸಕ್ರಿಯ ಸೇವೆಯಿಂದ ಜನಮನ್ನಣೆ ಗಳಿಸಿದ್ದಾರೆ. ಇವರ ಸಂಘಟನಾ ಚಾತುರ್ಯವನ್ನು ಗುರುತಿಸಿ ಈ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಗ್ರಾಮ ಪಂಚಾಯತ್ ಸದಸ್ಯೆಯಾಗಿ, ಧಾರ್ಮಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಸಕ್ರಿಯವಾಗಿರುವ ಸವಿತಾ ಬರ್ಕಳ ಕೊಳ್ನಾಡು ಅವರು ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಈ ನೇಮಕಾತಿ ನಡೆದಿದೆ. ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಲು ಮತ್ತು ಸಮಾಜಮುಖಿ ಕಾರ್ಯಗಳನ್ನು ತಳಮಟ್ಟಕ್ಕೆ ತಲುಪಿಸಲು ಈ ಆಯ್ಕೆ ಪೂರಕವಾಗಲಿದೆ” ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಮ್ಮ ಆಯ್ಕೆಗೆ ಸಹಕರಿಸಿದ ಮಾಜಿ ಸಚಿವ ಬಿ. ರಮನಾಥ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್ ಹಾಗೂ ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಐಡಾ ಸುರೇಶ್ ಅವರಿಗೆ ನೂತನ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹೊಸ ಜವಾಬ್ದಾರಿಯು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕವನ್ನು ಮತ್ತಷ್ಟು ಸದೃಢಗೊಳಿಸಲಿದೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

error: Content is protected !!