ವಿಟ್ಲ: ಗುರುಕುಲದ ಕೆರೆಯಲ್ಲಿ ತೇಲಿತು ಹತ್ತನೇ ತರಗತಿ ಹುಡುಗಿಯ ಮೃತದೇಹ

ವಿಟ್ಲ: ಬೆಂಗಳೂರಿನ ಸಿಗುವ ಸಕಲ ಸೌಕರ್ಯಗಳನ್ನು ಬಿಟ್ಟು, ಸಂಸ್ಕಾರ ಕಲಿಯಲೆಂದು ವಿಟ್ಲದ ಕೊಡಂಗಾಯಿ ಬಳಿಯ ಮೈತ್ರೇಯಿ ಗುರುಕುಲ ಸೇರಿದ ಆ ಎಳೆ ಜೀವಕ್ಕೆ ವಿಧಿ ಇಂಥದ್ದೊಂದು ಅಂತ್ಯ ಬರೆದಿದೆ ಅಂತ ಯಾರೂ ಊಹಿಸಿರಲಿಲ್ಲ. ಹತ್ತನೇ ತರಗತಿಯ ವೈಗ ಲಕ್ಷ್ಮೀ ಇನ್ನೇನು ಪರೀಕ್ಷೆಯ ಬಾಗಿಲು ಬಡಿಯುತ್ತಿದ್ದ ಹೊತ್ತಿನಲ್ಲಿ ಆಕೆ ಈಗ ಇಹಲೋಕ ತ್ಯಜಿಸಿದ್ದಾಳೆ.

ಕಳೆದ ಭಾನುವಾರದಿಂದ ವೈಗಾ ಸದ್ದಿಲ್ಲದೆ ಮಾಯವಾಗಿದ್ದಳು. ಇಡೀ ಗುರುಕುಲದ ಆವರಣದಲ್ಲಿ ಹುಡುಕಾಟ ನಡೆಯುತ್ತಿರುವಾಗಲೇ, ಸೋಮವಾರ ಬೆಳಿಗ್ಗೆ ಗುರುಕುಲದ ಕೆರೆಯ ನೀಲಿ ನೀರಿನ ಮೇಲೆ ಆಕೆಯ ಮೃತದೇಹ ತೇಲುತ್ತಿತ್ತು. ಅಕ್ಷರ ಕಲಿಯಬೇಕಾದ ಕೈಗಳು ಈಗ ನಿರ್ಜೀವವಾಗಿ ಕೆರೆಯ ಮಣ್ಣು ಹಿಡಿದಿದ್ದವು.

ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಶುರುವಾಗಿದೆ. ಆದರೆ, ಆ ಕೆರೆಯ ನೀರು ಮಾತ್ರ ಯಾವುದೋ ರಹಸ್ಯವನ್ನು ಬಚ್ಚಿಟ್ಟುಕೊಂಡಂತೆ ಮೌನವಾಗಿ ನಿಂತಿದೆ. ಮೃತದೇಹವನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ನಡೆಯುವ ಮರಣೋತ್ತರ ಪರೀಕ್ಷೆ ಆಕೆಯ ಸಾವಿನ ಹಿಂದಿನ ಅಸಲಿ ಕಥೆಯನ್ನು ಹೇಳಬೇಕಿದೆ. ಸದ್ಯಕ್ಕಂತೂ ಒಂದು ಪ್ರತಿಭಾವಂತ ಯುವತಿಯ ಕನಸುಗಳು ಗುರುಕುಲದ ಕೆರೆಯಲ್ಲಿ ಮುಳುಗಿಹೋಗಿವೆ!

error: Content is protected !!