ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮರಕೋಟ್ಲು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ನರಿಕೊಂಬು ಮರ್ದೊಳಿ ನಿವಾಸಿ ಸಂತೋಷ್ ಮೃತಪಟ್ಟ ದುರ್ದೈವಿ.

ಸಂತೋಷ್ ಅವರು ಬೆಳಿಗ್ಗೆ ತಮ್ಮ ಮನೆಯಿಂದ ಮಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬ್ರಹ್ಮರಕೋಟ್ಲು ಸಮೀಪ ಟಯರ್ ಬ್ಲಾಸ್ಟ್ ಆದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪಿಕಪ್ ವಾಹನವೊಂದು ನಿಂತಿತ್ತು. ಈ ವಾಹನಕ್ಕೆ ಸಂತೋಷ್ ಅವರ ಬೈಕ್ ಢಿಕ್ಕಿ ಹೊಡೆದಿದೆ.

ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
