ಉಳ್ಳಾಲ: ಬಣ್ಣದ ಕನಸುಗಳನ್ನು ಹೊತ್ತು, ಬದುಕಿನ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದ ಆ ಯುವಕನ ಪಾಲಿಗೆ ವಿಧಿ ಕ್ರೂರವಾಗಿ ಬಂದೆರಗಿದ ಘಟನೆ ತೊಕ್ಕೊಟ್ಟುವಿನಲ್ಲಿ ಸಂಭವಿಸಿದೆ.

ತೊಕ್ಕೊಟ್ಟುವಿನ ಆ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಹೊಸ ವಸ್ತ್ರಮಳಿಗೆ ಉದ್ಘಾಟನೆಯಾಗಬೇಕಿತ್ತು. ಅತಿಥಿಗಳು ಬರಬೇಕಿತ್ತು, ಹೂವಿನ ಹಾರಗಳು ಬೀಳಬೇಕಿತ್ತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಉದ್ಘಾಟನೆಗೆ ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ, ತಾನು ಕಟ್ಟಿದ ಕನಸಿನ ಮಳಿಗೆಯಲ್ಲೇ ವಿದ್ಯುತ್ ಆಘಾತಕ್ಕೆ ಒಳಗಾಗಿ 20 ವರ್ಷದ ಸಲ್ಮಾನ್ ಫಾರಿಶ್ ಮರಣವನ್ನಪ್ಪಿದ್ದಾರೆ.

ಪಜೀರು ಬೆಂಗೋಡಿ ಪದವಿನಿಂದ ಬಂದು, ಮಂಗಳೂರಿನ ಪಾಂಡೇಶ್ವರದ ಶಿವನಗರದಲ್ಲಿ ನೆಲೆಸಿದ್ದ ಸಲ್ಮಾನ್, ತನ್ನದೇ ಆದ ಸ್ವಂತ ಉದ್ಯಮ ಮಾಡಬೇಕೆಂದು ತೊಕ್ಕೊಟ್ಟುವಿನಲ್ಲಿ ವಸ್ತ್ರಮಳಿಗೆ ಆರಂಭಿಸಲು ತಯಾರಿ ನಡೆಸಿದ್ದರು. ರವಿವಾರ ರಾತ್ರಿ ಮಳಿಗೆಯಲ್ಲಿ ಲೈಟಿಂಗ್ಸ್, ಫಿಟ್ಟಿಂಗ್ಸ್ ಕೆಲಸಗಳು ಭರದಿಂದ ಸಾಗುತ್ತಿದ್ದವು. ಉದ್ಘಾಟನೆಯ ಸಡಗರದಲ್ಲಿ ಓಡಾಡುತ್ತಿದ್ದ ಸಲ್ಮಾನ್‌ಗೆ ಸಾವು ವಿದ್ಯುತ್ ತಂತಿಯ ರೂಪದಲ್ಲಿ ಹೊಂಚು ಹಾಕಿ ಕುಳಿತಿತ್ತು. ಕೆಲಸದ ನಡುವೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾದಾಗ ಸಲ್ಮಾನ್ ಕ್ಷಣಾರ್ಧದಲ್ಲಿ ಕುಸಿದುಬಿದ್ದಿದ್ದಾನೆ. ದೇರಳಕಟ್ಟೆಯ ಆಸ್ಪತ್ರೆಗೆ ತಲುಪುವ ಮೊದಲೇ ಆ ತರುಣನ ಉಸಿರು ಗಾಳಿಯಲ್ಲಿ ಸೇರಿ ಹೋಗಿತ್ತು.
