
ಕಾರ್ಕಳ: ತಾಲೂಕಿನ ಪಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಫಿಶ್ ಮೀಲ್ ಘಟಕದ ವಿರುದ್ಧ ಗ್ರಾಮಸ್ಥರ ಆಕ್ರೋಶದ ಕಟ್ಟೆಯೊಡೆದಿದ್ದು, ಈ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ನಾಳೆ (ಫೆ.23) ಸೋಮವಾರ ಬೆಳಗ್ಗೆ ಪಳ್ಳಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪಡುಬಿದ್ರೆಯಲ್ಲಿ ಸಾರ್ವಜನಿಕರ ವಿರೋಧಕ್ಕೆ ತುತ್ತಾಗಿ ಸ್ಥಳಾಂತರಗೊಂಡ ಘಟಕವೊಂದು ಈಗ ಪಳ್ಳಿಯ ಶಾಂತ ಪರಿಸರಕ್ಕೆ ಕಾಲಿಡುತ್ತಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಘಟಕದಿಂದ ಹೊರಬರುವ ಭೀಕರ ದುರ್ವಾಸನೆ ಮತ್ತು ತ್ಯಾಜ್ಯ ನೀರು ಅಂತರ್ಜಲವನ್ನು ಕಲುಷಿತಗೊಳಿಸಿ, ಗ್ರಾಮದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಗ್ರಾಮಸ್ಥರ ಪ್ರಬಲ ಆತಂಕವಾಗಿದೆ.

ಈ ಹಿನ್ನೆಲೆಯಲ್ಲಿ, ಗ್ರಾಮದ ಅಸ್ತಿತ್ವ ಮತ್ತು ಪರಿಸರವನ್ನು ಉಳಿಸಿಕೊಳ್ಳಲು ಪಕ್ಷಾತೀತವಾಗಿ ಒಂದಾಗಿರುವ ಹಿರಿಯರು, ಯುವಕರು ಹಾಗೂ ಮಹಿಳೆಯರು ಸೋಮವಾರ ಪಂಚಾಯತ್ ಕಚೇರಿಯ ಮುಂದೆ ಶಾಂತಿಯುತವಾಗಿ ಧರಣಿ ನಡೆಸಲಿದ್ದಾರೆ. “ನಮ್ಮ ಗ್ರಾಮದ ಜನವಸತಿ ಪ್ರದೇಶದಲ್ಲಿ ಇಂತಹ ಮಾರಕ ಘಟಕಗಳಿಗೆ ಅವಕಾಶ ನೀಡಬಾರದು” ಎಂಬ ಮನವಿಯನ್ನು ಪಂಚಾಯತ್ ಆಡಳಿತಕ್ಕೆ ಸಲ್ಲಿಸಿ, ಗ್ರಾಮಸ್ಥರ ಹಿತ ಕಾಯುವಂತೆ ಗ್ರಾಮಸ್ಥರು ವಿನಂತಿಸಲಿದ್ದಾರೆ.

ಈ ಪ್ರತಿಭಟನೆಯ ಮೂಲಕ ಪಳ್ಳಿಯ ಜನರ ಒಗ್ಗಟ್ಟಿನ ಧ್ವನಿಯನ್ನು ಆಡಳಿತ ವ್ಯವಸ್ಥೆಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಪ್ರತಿಭಟನೆಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.