ಪಣಂಬೂರಿನಲ್ಲಿ ಅಂತರ್ ರಾಜ್ಯ ಗಾಂಜಾ ಜಾಲ ಪತ್ತೆ; 22 ಕೆ.ಜಿ. ಮಾಲು ಸಹಿತ ನಾಲ್ವರ ಬಂಧನ

ಮಂಗಳೂರು: ಹೊರ ರಾಜ್ಯಗಳಿಂದ ಅಕ್ರಮವಾಗಿ ಗಾಂಜಾ ತಂದು ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದ ಅಂತರಾಷ್ಟ್ರೀಯ ಜಾಲವನ್ನು ಪಣಂಬೂರು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ 22 ಕೆಜಿ 250 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಬಂಧಿತರನ್ನು ಮಹಾರಾಷ್ಟ್ರದ ಜಲಗಾಂ ಜಿಲ್ಲೆಯ ಕರಣ್ ಬಾಬು ರಾಂ ಜಾದವ್ (27), ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಸಮೀರ್ ಶಾ (19), ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ (48) ಮತ್ತು ಮಂಗಳೂರು ಕಾವೂರಿನ ಇಬ್ರಾಹಿಂ ಕಲೀಲ್ (47) ಎಂದು ಗುರುತಿಸಲಾಗಿದೆ.

ದಿನಾಂಕ 21-02-2026ರ ಶನಿವಾರದಂದು ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಹೊರ ರಾಜ್ಯದಿಂದ ತಂದ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಸುಮಾರು 11,12,500 ರೂ. ಮೌಲ್ಯದ 22 ಕೆಜಿ 250 ಗ್ರಾಂ ಗಾಂಜಾ, 18,000 ರೂ. ಮೌಲ್ಯದ 6 ಮೊಬೈಲ್ ಫೋನ್‌ಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ ಸುಮಾರು 12,30,500 ರೂ. ಎಂದು ಅಂದಾಜಿಸಲಾಗಿದೆ.

ಪೊಲೀಸ್ ತನಿಖೆಯ ವೇಳೆ, ಕರಣ್ ಬಾಬು ಮತ್ತು ಸಮೀರ್ ಶಾ ಎಂಬುವವರು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂಲದ ವ್ಯಕ್ತಿಗಳಿಂದ ಗಾಂಜಾ ಪಡೆದು ತರುತ್ತಿದ್ದರು ಎಂದು ತಿಳಿದುಬಂದಿದೆ. ಈ ಮಾಲನ್ನು ಉಡುಪಿಯ ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ಸಂಗ್ರಹಿಸಿ, ಬಳಿಕ ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್ ಮತ್ತು ಪಣಂಬೂರಿನ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ತಂಡವು ಈ ಹಿಂದೆ ಕೂಡ ಹಲವು ಬಾರಿ ಅಕ್ರಮವಾಗಿ ಗಾಂಜಾ ತಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದೆ.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!