ಗದಗ: ಗಂಗಾವತಿಯ ಗಾಳಿ ಈಗ ಗದಗಿನ ಕಡೆಗೆ ತಿರುಗಿದೆ. ಅಲ್ಲಿನ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ, ಸಾಕ್ಷಾತ್ ಡಾಕ್ಟರ್ ಚಂದ್ರು ಲಮಾಣಿ ಈಗ ಲೋಕಾಯುಕ್ತದ ʻಆಪರೇಷನ್’ಗೆ ಬಲಿಯಾಗಿದ್ದಾರೆ.

ಕಥೆ ಶುರುವಾಗುವುದು ಹೀಗೆ… ಗದಗದ ಚಿಂಚೋಳಿಯ ವಿಜಯ್ ಪೂಜಾರ್ ಎನ್ನುವ ಗುತ್ತಿಗೆದಾರ ಸಣ್ಣ ನೀರಾವರಿ ಇಲಾಖೆಯ ತಡೆಗೋಡೆ ಕಟ್ಟೋ ಕೆಲಸ ಹಿಡಿದಿದ್ದರು. ಕೆಲಸ ಏನೋ ಸಲೀಸಾಗಿ ಮುಗಿದಿತ್ತು. ಆದರೆ, ಆ ಬಿಲ್ ಪಾಸ್ ಆಗಬೇಕಲ್ಲ? ಅಲ್ಲೇ ನೋಡಿ ಈ ಶಾಸಕರು ಗಾಳ ಹಾಕಿದ್ದು. ಹನ್ನೊಂದು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ನಿನ್ನ ಕೆಲಸ ಆಗೋದು ಅಂತ ಡಾಕ್ಟರ್ ಸಾಹೇಬರು ಡಿಮ್ಯಾಂಡ್ ಇಟ್ಟಿದ್ದರು ಎನ್ನಲಾಗಿದೆ.
ಪೂಜಾರ್‌ಗೂ ಸಾಕು ಸಾಕಾಗಿ ಹೋಗಿತ್ತು. “ಎಲ್ಲಿಂದ ತರಲಿ ಅಷ್ಟು ಹಣ?” ಅಂತ ಕೊನೆಗೆ ಲೋಕಾಯುಕ್ತ ಮೆಟ್ಟಿಲೇರಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಅಸಲಿ ಡ್ರಾಮಾ.

ಲಕ್ಷ್ಮೀಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆ—ಶಾಸಕ ಲಮಾಣಿ ಅವರದ್ದೇ ಸಾಮ್ರಾಜ್ಯ. ಅಲ್ಲಿ ಐದು ಲಕ್ಷ ರೂಪಾಯಿಯ ಕಂತೆ ಕಂತೆ ನೋಟುಗಳು ಟೇಬಲ್ ಮೇಲೆ ಓಡಾಡುತ್ತಿದ್ದವು. ಶಾಸಕರ ಜೊತೆ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಮತ್ತು ಗುರುನಾಯಕ್ ಕೂಡ ʻಕಲೆಕ್ಷನ್’ ಮೂಡ್‌ನಲ್ಲಿದ್ದರು. ಆದರೆ ಇವರಿಗೆ ಗೊತ್ತಿರಲಿಲ್ಲ, ಅಲ್ಲಿ ಆಸ್ಪತ್ರೆಯ ನರ್ಸ್‌ಗಳಿಗಿಂತ ವೇಗವಾಗಿ ಲೋಕಾಯುಕ್ತ ಅಧಿಕಾರಿಗಳು ಹೊಂಚು ಹಾಕಿದ್ದಾರೆ ಅಂತ!
ಯಾವಾಗ ಹಣ ಕೈ ಬದಲಾಯ್ತೋ, ಲೋಕಾಯುಕ್ತ ಎಸ್ಪಿ ನೇತೃತ್ವದ ಟೀಮ್ ರೆಡ್ ಹ್ಯಾಂಡ್ ಆಗಿ ಎಲ್ಲರನ್ನೂ ವಶಕ್ಕೆ ಪಡೆಯಿತು. ಶಾಸಕರ ಕೈಗೆ ಫಿನಾಫ್ತಲೀನ್ ಪೌಡರ್ ಬಣ್ಣ ಮೆತ್ತಿಕೊಂಡಿತು. ಈಗ ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಶಿಷ್ಯಂದಿರು ಲೋಕಾಯುಕ್ತರ ಅತಿಥಿಗಳು.
ಇತ್ತ ಬಿಕ್ಲು ಶಿವ ಕೊಲೆ ಕೇಸಲ್ಲಿ ಬೈರತಿ ಬಸವರಾಜ್ ಜೈಲು ಹಕ್ಕಿಯಾಗಿದ್ದರೆ, ಅತ್ತ ಲಮಾಣಿ ಲಂಚದ ಕೇಸಲ್ಲಿ ಸಿಕ್ಕಿಬಿದ್ದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಅಧಿಕಾರದ ಮದದಲ್ಲಿ ಮೆರೆಯುವವರಿಗೆ ಲೋಕಾಯುಕ್ತ ಆಗಾಗ ಇಂತಹ ಬಿಸಿ ಮುಟ್ಟಿಸುತ್ತಲೇ ಇರುತ್ತದೆ. ಗದಗಿನ ಈ ಬಾಲಾಜಿ ಆಸ್ಪತ್ರೆ ಈಗ ರೋಗಿಗಳಿಗಿಂತ ಹೆಚ್ಚಾಗಿ ಪೊಲೀಸರ ಪಾಲಿಗೆ ತಪಾಸಣಾ ಕೇಂದ್ರವಾಗಿ ಹೋಗಿದೆ!
