ಭೀಕರ ಸರಣಿ ಅಪಘಾತ: 28 ಪ್ರಯಾಣಿಕರಿಗೆ ಗಾಯ, ಎಂಟು ಮಂದಿಯ ಸ್ಥಿತಿ ಗಂಭೀರ

ಅಂಕೋಲಾ: ಲಾರಿ ಹಾಗೂ ಎರಡು ಖಾಸಗಿ ಬಸ್‌ಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 12 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 28 ಪ್ರಯಾಣಿಕರು ಗಾಯಗೊಂಡ ಘಟನೆ ಸುಂಕಸಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಇಂದು(ಫೆ.19) ಬೆಳಗ್ಗೆ ನಡೆದಿದೆ.

ಗಾಯಾಳುಗಳ ಪೈಕಿ ಎಂಟು ವಿದೇಶಿ ಪ್ರಜೆಗಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಅಂಕೋಲಾ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಹಂಪಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಖಾಸಗಿ ಬಸ್ಸಿನ ಹಿಂಬದಿಯಲ್ಲೇ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್ ಕೂಡ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮೂರೂ ವಾಹನಗಳು ಅಕ್ಷರಶಃ ಜಖಂಗೊಂಡಿವೆ.

ಅಪಘಾತದ ಭೀಕರತೆಗೆ ಇಬ್ಬರೂ ಬಸ್ ಚಾಲಕರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರು ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ಹರಸಾಹಸ ಪಟ್ಟು ಗಾಯಾಳುಗಳನ್ನು ವಾಹನಗಳಿಂದ ಹೊರತೆಗೆದರು. ಕೂಡಲೇ ಎಲ್ಲರನ್ನೂ ಅಂಕೋಲಾ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎನ್ನಲಾಗಿದೆ.

ಹೆದ್ದಾರಿಯ ಮಧ್ಯಭಾಗದಲ್ಲೇ ವಾಹನಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಕೋಲಾ ಪೊಲೀಸರು ಮತ್ತು ಸುಂಕಸಾಳ ಹೊರಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!