ಫಲ್ಗುಣಿ ನದಿಯ ಒಡಲಲ್ಲಿ ವಿಷದ ಕೊಳೆ: ಅಖಾಡಕ್ಕಿಳಿದ ಶಾಸಕ ಭರತ್ ಶೆಟ್ಟಿ!

ಮಂಗಳೂರು: ಅದು ಮಂಗಳೂರಿನ ಕೂಳೂರು ರಾಯಿಕಟ್ಟೆ ಪರಿಸರ. ಒಂದು ಕಾಲದಲ್ಲಿ ಕನ್ನಡಿಯಂತೆ ಹೊಳೆಯುತ್ತಿದ್ದ ಆ ಫಲ್ಗುಣಿ ನದಿ ಈಗ ಸಾಕ್ಷಾತ್ ನರಕದ ದಾರಿಯಂತಾಗಿದೆ. ನದಿಯ ಒಡಲಿಗೆ ಯಾರೋ ಪುಣ್ಯಾತ್ಮರು ಸುರಿಯುತ್ತಿರುವ ಆ ಕೊಳಚೆ ನೀರು, ವಿಷದ ನೊರೆ… ಅಬ್ಬಾ! ಅದರ ಘಾಟು ಮೂಗಿಗೆ ಬಡಿದರೆ ಸಾಕು, ಪ್ರಾಣಪಕ್ಷಿ ಹಾರಿಹೋದೀತು. ನದಿಯಲ್ಲಿ ಈಜಾಡಬೇಕಿದ್ದ ಮೀನುಗಳು ಈಗ ಹೆಣವಾಗಿ ತೇಲುತ್ತಿವೆ. ಮೀನುಗಾರರ ಬದುಕಿಗೆ ಕೊಳ್ಳಿ ಇಟ್ಟವರು ಯಾರು?

ಈ ಸುದ್ದಿ ಹರಡುತ್ತಿದ್ದಂತೆಯೇ ಮಂಗಳೂರು ಉತ್ತರದ ಶಾಸಕ ಡಾ. ವೈ ಭರತ್ ಶೆಟ್ಟಿ ಅಖಾಡಕ್ಕಿಳಿದಿದ್ದಾರೆ. ಹವಾನಿಯಂತ್ರಿತ ಕಚೇರಿಯಲ್ಲಿ ಕೂರದೆ, ಸಾಕ್ಷಾತ್ ನದಿ ತೀರಕ್ಕೇ ಇಳಿದು ಅಧಿಕಾರಿಗಳ ಬೆವರಿಳಿಸಿದ್ದಾರೆ.

“ನೋಡಿ ಮೀನುಗಳು ಸಾಯುತ್ತಿರುವುದು ಕೇವಲ ಪ್ರಾಣಿಗಳಲ್ಲ, ಇಲ್ಲಿನ ಜನರ ಬದುಕು ಸಾಯುತ್ತಿದೆ,” ಎಂಬ ಶಾಸಕರ ಆ ಫರ್ಮಾನು ಈಗ ಅಧಿಕಾರಿಗಳ ನಿದ್ದೆಗೆಡಿಸಿದೆ.

ಶಾಸಕರ ಗರ್ಜನೆಗೆ ಎಚ್ಚೆತ್ತ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಈಗ ಫೀಲ್ಡಿಗಿಳಿದು ನೀರಿನ ಗುಣಮಟ್ಟ ಅಳೆಯುತ್ತಿವೆ. “ನೀರು ವಿಷವಾಗಿದ್ದು ಹೇಗೆ? ಇದಕ್ಕೆ ಕಾರಣರಾದ ಆ ʻದೊಡ್ಡ ಮನುಷ್ಯರು’ ಯಾರು?” ಎಂಬ ಹುಡುಕಾಟ ಶುರುವಾಗಿದೆ. ಸದ್ಯಕ್ಕೆ ನದಿ ಸ್ವಚ್ಛಗೊಳಿಸುವ ಕಾಯಕಕ್ಕೆ ಚಾಲನೆ ಸಿಕ್ಕಿದೆ.

ಆದರೆ ನೆನಪಿರಲಿ, ಕೇವಲ ಅಧಿಕಾರಿಗಳ ಭೇಟಿಯಿಂದ ನದಿ ತಿಳಿಯಾಗುವುದಿಲ್ಲ. ಈ ವಿಷದ ಮೂಲ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೆ ಫಲ್ಗುಣಿ ನದಿಯ ಕಣ್ಣೀರು ನಿಲ್ಲುವುದಿಲ್ಲ. ಶಾಸಕರ ಈ ಬಿಗಿಯಾದ ಕ್ರಮವೊಂದೇ ಈಗ ನದಿ ತೀರದ ಜನರಿಗೆ ಉಳಿದಿರುವ ಏಕೈಕ ಭರವಸೆ.

error: Content is protected !!