
ಬಂಟ್ವಾಳ: ಶಿವರಾತ್ರಿ ನಿಮಿತ್ತ ಕಲ್ಲಡ್ಕದ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಆಟೋ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾರಿಪಳ್ಳ – ಕಡೆಗೋಳಿ ಎಂಬಲ್ಲಿ ಭಾನುವಾರ(ಫೆ.15) ಬೆಳಿಗ್ಗೆ ನಡೆದಿದೆ.

ಮಂಗಳೂರಿನ ಅತ್ತಾವರದ ಪ್ರಕಾಶ್ ಎಂಬವರ ಪತ್ನಿ ವಿಶಾಲಾಕ್ಷಿ (43) ಮೃತ ಮಹಿಳೆ.
ವಿಶಾಲಾಕ್ಷಿ ತನ್ನ ತಂಗಿ ಮತ್ತು ಅವರ ಮಕ್ಕಳ ಜೊತೆಗೆ ಸಂಬಂಧಿಕರ ಆಟೋದಲ್ಲಿ ಮಂಗಳೂರಿನಿಂದ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ವೇಳೆ ರಾ.ಹೆ ಯಲ್ಲಿ ಮಾರಿಪಳ್ಳ – ಪೊಳಲಿ ದ್ವಾರ ಕಡೆಯಿಂದ ಬೈಕ್ ಸವಾರನೊಬ್ಬ ನುಗ್ಗಿಸಿದ್ದು, ಈ ವೇಳೆ ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಆಟೋ ರಿಕ್ಷಾ ಚಾಲಕ ಅಲ್ಲೇ ನಿಂತಿದ್ದ ಮತ್ತೊಂದು ಆಟೋಗೆ ಡಿಕ್ಕಿಯಾಗಿ ರಸ್ತೆಗೆ ಪಲ್ಟಿಯಾಗಿದೆ.

ಅಪಘಾತ ಸಂದರ್ಭದಲ್ಲಿ ಬದಿಯಲ್ಲಿ ಕುಳಿತಿದ್ದ ವಿಶಾಲಾಕ್ಷಿ ಅವರು ರಸ್ತೆಗಪ್ಪಳಿಸಿದ್ದರಿಂದ ತಲೆಗೆ ಪೆಟ್ಟು ಬಿದ್ದಿದೆ. ಉಳಿದವರು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ವಿಶಾಲಾಕ್ಷಿಯರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಂಟ್ವಾಳ ಗ್ರಾಮಾಂತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.