ಧರ್ಮಸ್ಥಳ ಬುರುಡೆ ಪ್ರಕರಣ: ಅರ್ಜಿಗಳ ವಿಚಾರಣೆ ಮಾ. 5ಕ್ಕೆ ಮುಂದೂಡಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತರು ಎಂದು ಪರಿಗಣಿಸುವುದು ಹಾಗೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಶುಕ್ರವಾರ(ಫೆ.13) ನಡೆಯಬೇಕಿದ್ದ ವಿಚಾರಣೆಯು ಮಾ. 5ಕ್ಕೆ ಮುಂದೂಡಲ್ಪಟ್ಟಿದೆ.

ಫೆ. 5ರಂದು ಅರ್ಜಿಗಳಿಗೆ ಸಂಬಂಧಿಸಿ ಧರ್ಮಸ್ಥಳ ಕ್ಷೇತ್ರದ ಪರ ವಕೀಲ ಸಿ.ವಿ.ನಾಗೇಶ್‌ ಹಾಗೂ ಎಸ್‌ಐಟಿ ಪರ ವಕೀಲ ದಿವ್ಯರಾಜ್‌ ಹೆಗ್ಡೆ ತಮ್ಮ ವಾದ ಮಂಡನೆ ಮಾಡಿದ್ದು, ನ್ಯಾಯಾಧೀಶ ರಾಜೇಂದ್ರ ಪ್ರಸಾದ್‌ ಅವರು ವಾದಗಳನ್ನು ಆಲಿಸಿ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿದ್ದರು. ಮುಂದಿನ ವಿಚಾರಣೆಯ ವೇಳೆ ಧರ್ಮಸ್ಥಳದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದ ವಕೀಲರಿಗೆ ವಾದ ಮಂಡನೆಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಆದರೆ ಶುಕ್ರವಾರ ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಯಾವುದೇ ವಾದ ಮಂಡನೆಯಾಗದೇ ಇದ್ದು, ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

error: Content is protected !!