ಮನ್‌ರೇಗಾ ಮರುಸ್ಥಾಪನೆಗೆ ಆಗ್ರಹಿಸಿ ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರಿಂದ ಪಾದಯಾತ್ರೆ: ಇನಾಯತ್‌ ಅಲಿ ಭರ್ಜರಿ ಶಕ್ತಿಪ್ರದರ್ಶನ

ಮಂಗಳೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಹಾಗೂ ಯೋಜನೆಯ ಹಳೆಯ ಸ್ವರೂಪದ ಮರುಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಸುಳ್ಯದಿಂದ ಮೂಲ್ಕಿವರೆಗೆ ನಾಲ್ಕು ದಿನಗಳ ಬೃಹತ್ ಪಾದಯಾತ್ರೆ ಇಂದು . ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ನೇತೃತ್ವದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಪಾದಯಾತ್ರೆಯುದ್ದಕ್ಕೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಹೈಕಮಾಂಡ್‌ ಮುಂದೆ ಅಲಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು.

ಸುರತ್ಕಲ್‌ನಲ್ಲಿ ಕಾರ್ಯಕರ್ತರ ಅಬ್ಬರ
ಪಾದಯಾತ್ರೆಯ ಅಂತಿಮ ದಿನವಾದ ಇಂದು ಮಂಗಳೂರಿನ ಕೋಳೂರು ಗೋಲ್ಡ್‌ ಪಿಂಚ್‌ ಮೈದಾನದಿಂದ ಆರಂಭಗೊಂಡ ಮೆರವಣಿಗೆ ಸುರತ್ಕಲ್‌ವರೆಗೂ ಅತ್ಯಂತ ಅಬ್ಬರದಿಂದ ಸಾಗಿತು. ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕಿದರು. ಸುರತ್ಕಲ್‌ನ ಕುಲಾಲ ಭವನದಲ್ಲಿ ಜಮಾವಣೆಗೊಂಡ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಮೂಲ್ಕಿಯಲ್ಲಿ ಬೃಹತ್ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.

2029ಕ್ಕೆ ರಾಹುಲ್‌ ಗಾಂಧಿ ಪ್ರಧಾನಿಯಾಗಲಿ: ಇನಾಯತ್‌ ಅಲಿ
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಇನಾಯತ್‌ ಅಲಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರಿದರು. “ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮನ್‌ರೇಗಾ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿ ಅವರಿಗೆ ಅಪಮಾನ ಮಾಡಲಾಗಿದೆ. ಈ ಯೋಜನೆಯ ಬದಲಾವಣೆಯಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಇದು ಮರುಸ್ಥಾಪನೆಯಾಗುವವರೆಗೂ ನನ್ನ ಹೋರಾಟ ನಿಲ್ಲದು” ಎಂದು ಗುಡುಗಿದರು.

ಇದೇ ವೇಳೆ ಮುಂಬರುವ ಲೋಕಸಭೆ ಚುನಾವಣೆಯ ಗುರಿಯನ್ನು ಸಾರಿದ ಅವರು, “2029ರಲ್ಲಿ ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಏಕೈಕ ಗುರಿ. ನಮ್ಮ ಪ್ರತಿಯೊಂದು ಹೆಜ್ಜೆಯೂ ಅವರನ್ನು ದೇಶದ ಸರ್ವೋಚ್ಚ ಪೀಠದಲ್ಲಿ ಕೂರಿಸುವುದಕ್ಕಾಗಿಯೇ ಇರುತ್ತದೆ” ಎಂದು ಘೋಷಿಸಿದರು.

 

error: Content is protected !!