ಮಂಗಳೂರು: ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಮೀಪುಗುರಿ ನಿವಾಸಿಯಾದ ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವೈಶಾಲಿ ಕೇರಳದ ಮೊಹಮ್ಮದ್ ಮಿದ್ಲಾಜ್ ಜೊತೆ ನಿಖಾ ಮಾಡಿಕೊಂಡು ನಾಪತ್ತೆಯಾಗಿರುವ ಪ್ರಕರಣವು ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಪ್ರಕರಣದ ಹಿಂದೆ ‘ಲವ್ ಜಿಹಾದ್’, ಡ್ರಗ್ಸ್ ಮಾಫಿಯಾ ಹಾಗೂ ಎಸ್‌ಡಿಪಿಐ ಸಂಘಟನೆಯ ವ್ಯವಸ್ಥಿತ ಸಂಚು ಅಡಗಿದೆ ಎಂದು ಆಕೆಯ ಪೋಷಕರು ಮತ್ತು ಹಿಂದೂ ಜಾಗರಣ ವೇದಿಕೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ವಯನಾಡು ಠಾಣೆಯಲ್ಲಿ ಪೊಲೀಸರ ದರ್ಪ: ಹೆತ್ತವರ ಅಳಲು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂದೆ ವಿಶ್ವನಾಥ್, ಕೇರಳದಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಮಂಗಳೂರಿಗೆ ಬಂದಿದ್ದೇವೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಗಿ ದೂರು ನೀಡಿದ್ದು, ಪೊಲೀಸರು ಮಗಳನ್ನು ಪತ್ತೆಮಾಡಿಕೊಡುವ ನಿರೀಕ್ಷೆ ಇದೆ ಎಂದಿದ್ದಾರೆ.
ಮಗಳು ನಾಪತ್ತೆಯಾದ ಬೆನ್ನಲ್ಲೇ ಬೆಳಿಗ್ಗೆ ವಯನಾಡಿಗೆ ಹೋದೆವು. ಬೆಳಿಗ್ಗೆಯಿಂದ ರಾತ್ರಿ 11ರ ತನಕ ಕಾದರೂ ಮಗಳ ಜೊತೆ ಮಾತನಾಡ್ಲಿಕ್ಕೆ ಅವಕಾಶ ಕೊಡಲಿಲ್ಲ. ರಾತ್ರಿ 11 ಗಂಟೆಗೆ ಮಗಳನ್ನು ಕರೆಸಿ ಕೇವಲ ಐದು ನಿಮಿಷ ಮಾತ್ರ ಮಾತನಾಡಿದ ಮಗಳು, ನಮ್ಮ ಜೊತೆ ಬರುವುದಾಗಿ ತಿಳಿಸಿ ಪೇಪರ್‌ಗೆ ಸಹಿ ಹಾಕಿದ್ದಳು. ಇದೆಲ್ಲಾ ಆದ ಮೇಲೆ ನೀವಿನ್ನು ಹೋಗಿ ಅಂತ ನಮ್ಮನ್ನು ಹೊರಗಡೆ ಹಾಕಿದ್ದರು. ಆನಂತರ ಹುಡುಗನೊಂದಿಗೆ ಮಾತಾಡ್ಲಿಕ್ಕೆ ಇದೆ ಎಂದು ಹೇಳಿ, ಅವನೊಂದಿಗೆ ಕೇವಲ ಎರಡು ನಿಮಿಷ ಮಾತಾಡಿದ ಮೇಲೆ ಎಲ್ಲಾ ಚೇಂಜ್ ಆಯ್ತು. ಆಗ ಪೊಲೀಸರು ಪೇಪರಲ್ಲಿರುವ ಅಂಶಗಳನ್ನು ಬದಲಿಸಿ ಮಾಡಿ ಮಗಳನ್ನು ಅವನ ಹೊತೆ ಕಳಿಸಿದ್ದಾರೆ. ಕೇರಳದಲ್ಲಿ ನಮಗೆ ನ್ಯಾಯ ಸಿಗಲಿಕ್ಕಿಲ್ಲ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಇದರಲ್ಲಿ ಎಸ್‌ಡಿಪಿಐ ಅವರ ಕೈವಾಡ ಇದೆ. ಲವ್ ಜಿಹಾದ್ ನಡೆಯುತ್ತಾ ಇದೆ ಎಂದು ಆರೋಪಿಸಿದರು.

ತಾಯಿ ಲತಾ ಮಾತನಾಡಿ, ಸುರತ್ಕಲ್ ಪೊಲೀಸರ ಜೊತೆ ಆದಿತ್ಯವಾರ ರಾತ್ರಿ ಹೊರಟು ವಯನಾಡಿಗೆ ಬಂದಿದ್ದೆವು. ರಾತ್ರಿ ನಿಮ್ಮ ಮಗಳು ಸಿಕ್ಕಿದ್ದಾಳೆ, ಸ್ಟೇಷನ್‌ಗೆ ಬನ್ನಿ ಅಂದಾಗ, ನಾವು 3 ಗಂಟೆಗೆ ಸ್ಟೇಷನ್‌ಗೆ ಮುಟ್ಟಿದೆವು. ಪೊಲೀಸರು ನಮಗೆ ಗೌರವನ್ನೇ ಕೊಡ್ಲಿಲ್ಲ. ಮೂಲೆಯಲ್ಲಿ ಕೂತ್ಕೊಳ್ಳಲು ಹೇಳಿದ್ದಾರೆ. ಮಗಳನ್ನು ಮತ್ತೊಂದು ರೂಮಲ್ಲಿ ಇರಿಸಿ, 5 ನಿಮಿಷ ಮಾತಾಡಿ ಮುಗಿಸಿ ಎಂದು ಹೇಳಿದ್ದಾರೆ. ನಾನು ಅತ್ತಾಗ, ಇಲ್ಲಿ ನೀವು ಅ ಅಳುವುದ ಬೇಡ ಎಂದಿದ್ದಾರೆ. ಮಗಳಿಗೆ ನಮ್ಮನ್ನು ನೋಡಿ ಬೇಸರ ಆಗಿ ಅತ್ತು, ನಾವು ನಿಮ್ಮ ಜೊತೆ ಬರ್ತೇನೆ ಎಂದು ಹೇಳಿದ್ದಳು. ನಾನು ಮಗಳನ್ನು ಅಪ್ಪಲು ಮುಂದಾದಾಗ, ಪೊಲೀಸರು ʻಟಚ್ ಮಾಡಲು ಇಲ್ಲ ದೂರ ನಿಲ್ಲಿ ಎಂದು ಹೇಳಿ ಹೊರಗಡೆ ನಿಲ್ಲಿಸಿದ್ದಾರೆ. ಅವರ ಜನ ಒಳಗಡೆಯೇ ಇದ್ರು. ನಮ್ಮನ್ನು ಬಿಡಲಿಲ್ಲ. ಹೊರಗೆ ಬಂದಾಗ ಮಗಳು, ನೀವು ಹೋಗಿ ನಾಳೆ ಬರ್ತೇನೆ ಅಂತ ಹೇಳಿದ್ದಾಳೆ. ಅಲ್ಲಿನ ಪೊಲೀಸರು ಸ್ಟೇಷನ್‌ನಿಂದ ನಮ್ಮನ್ನು ಓಡಿಸಿದ್ದಾರೆ. ನಮ್ಮವರನ್ನು ಯಾರನ್ನೂ ಬಿಡಲಿಲ್ಲ. ಸಣ್ಣ ಮಗಳು ಹಾಗೂ ನಮ್ಮನ್ನು ಮಾತ್ರ ಒಳಗಡೆ ಬಿಟ್ಟಿದ್ದಾರೆ. ಅವರ 15 ಮಂದಿ ಇದ್ದರು. ನಿಮ್ಮ ಎಫ್‌ಐಆರ್ ಇಲ್ಲಿಗೆ ಕ್ಲೋಸ್ ಆಗಿದೆ ಎಂದಿದ್ದಾರೆ.

ಪಿಜಿಗಳಲ್ಲಿನ ಅಕ್ರಮ ಚಟುವಟಿಕೆಗಳ ಬಯಲು
ಮಗಳು ನಾಪತ್ತೆಯಾಗುವ ಮೊದಲು ಸುರತ್ಕಲ್‌ನ ಪಿಜಿಗೆ ಭೇಟಿ ನೀಡಿದ್ದಾಗ ಆಘಾತಕಾರಿ ದೃಶ್ಯ ಕಂಡುಬಂದಿದೆ ಎಂದು ಲತಾ ತಿಳಿಸಿದರು. “ಹುಡುಗಿಯರಿದ್ದ ಪಿಜಿ ಕೊಠಡಿಯಿಂದ ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗ ಹೊರಬಂದರು. ಹುಡುಗಿಯರ ರೂಮಿನಲ್ಲಿ ಹುಡುಗನಿಗೆ ಏನು ಕೆಲಸ ಎಂದು ಪ್ರಶ್ನಿಸಿದರೆ ʻಅದು ನಮ್ಮಿಷ್ಟ’ ಎಂದು ಉದ್ಧಟತನ ತೋರಿದರು. ಇಂತಹ ಪಿಜಿ ಹಾಗೂ ಹೋಂ ಸ್ಟೇಗಳ ಬಗ್ಗೆ ತನಿಖೆ ನಡೆಸಬೇಕು,” ಎಂದು ಅವರು ಆಗ್ರಹಿಸಿದರು.
ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದು ಹೇಗೆ?
ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ವೈಶಾಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಒಬ್ಬ ಮತಾಂಧ ಅವಳ ದಾರಿ ತಪ್ಪಸಿದ್ದಾನೆ. ಅವಳದ್ದು ಸಣ್ಣ ವಯಸ್ಸು ಆಗಿರುವುದರಿಂದ ಇದನ್ನು ಸರಿಪಡಿಸಬೇಕಿತ್ತು. ಆದರೆ ಕೇರಳ ಸರ್ಕಾರ ಮತಾಂತರ ಹಾಗೂ ಲವ್‌ಜಿಹಾದ್‌ಗೆ ಪ್ರೋತ್ಸಾಹ ನೀಡುತ್ತಿದೆ. ಇದರ ಹಿಂದೆ ಡ್ರಗ್ಸ್ ಮಾಫಿಯಾವೂ ಇದೆ. ಹುಡುಗಿಯನ್ನು ಬೇರೆ ಕಡೆ ಕರ್ಕೊಂಡು ಹೋಗಿ ಬ್ಲ್ಯಾಕ್ ಮೇಲ್ ಮಾಡಿರಬೇಕು. ಬೆದರಿಕೆ ಹಾಕಿ ಮನಃಪರಿವರ್ತನೆ ಮಾಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಸುರತ್ಕಲ್ನಲ್ಲಿ ಡ್ರಗ್ಸ್ ಜಾಲ ಮಿತಿಮೀರಿದ್ದು, ಶಿಕ್ಷಣ ಸಂಸ್ಥೆಗಳು, ಪಿಜಿಗಳು, ಹೋಂಸ್ಟೇಗಳು ಇದನ್ನು ನಿಯಂತ್ರಿಸುವ ಜವಾಬ್ದಾರಿ ಇದೆ. ವೈಶಾಲಿ ಇರುವ ಪಿಜಿಯಲ್ಲಿ ಹುಡುಗ- ಹುಡುಗಿಯರು ಒಟ್ಟಿಗೆ ಇದ್ದರಂತೆ. ಹಾಗಾಗಿ ಪೊಲೀಸ್ ಆಯುಕ್ತರೇ ಎಲ್ಲಾ ಹೋಂಸ್ಟೇ, ಪಿಜಿಗಳ ಲಿಸ್ಟ್ ತೆಗೆದುಕೊಂಡು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ವೈಶಾಲಿ ಜನವರಿ 23ರವರೆಗೆ ಬೆಂಗಳೂರಿನ ಕಂಪೆನಿಯೊಂದರ ಪಿಜಿಯಲ್ಲಿದ್ದಳು ಎಂದು ಪೋಷಕರು ಭಾವಿಸಿದ್ದರು. ಬೆಂಗಳೂರಿನಲ್ಲಿದ್ದವಳು ಇಲ್ಲಿಗೆ ಬಂದು ಈ ಜಾಲಕ್ಕೆ ಸಿಲುಕಿದ್ದು ಹೇಗೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ನರಸಿಂಹ ಮಾಣಿ ಒತ್ತಾಯಿಸಿದರು. ವೈಶಾಲಿ ಪ್ರಕರಣದಲ್ಲಿ ಚಿನ್ನದ ಅಂಗಡಿ ಮಾಲೀಕ ಹಾಗೂ ಎಸ್‌ಡಿಪಿಐ ಸಂಘಟನೆಯ ನೇರ ಶಾಮೀಲಾತಿ ಇದೆ. ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದರೆ ಮಗಳು ಸಿಗುತ್ತಿದ್ದಳು ಎಂದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಮಿತ್ ಗುಂಡಳಿಕೆ, ಮಂಗಳೂರು ಮಹಾನಗರ ಜಿಲ್ಲಾ ಸಂಯೋಜಕ ಲಿಖಿತ್ ರಾಜ್ ಮೂಡುಶೆಡ್ಡೆ ಇದ್ದರು.