ಉಪ್ಪಿನಂಗಡಿ: ಅದು ಫೆಬ್ರವರಿ 11ರ ಸುಡುಬಿಸಿಲಿನ ಮಧ್ಯಾಹ್ನ. ತೆಕ್ಕಾರು ಗ್ರಾಮದ ಕನರಾಜೆಯ ಆ ಇಳಿಜಾರು ರಸ್ತೆಯಲ್ಲಿ ಸೆಟ್ರಿಂಗ್ ಸಾಮಗ್ರಿಗಳನ್ನು ಹೇರಿಕೊಂಡು ಹೊರಟಿದ್ದ ಪಿಕಪ್ ವಾಹನದ ಮೇಲೆ ಸಾವಿನ ನೆರಳು ಬಿದ್ದಿತ್ತು. ಅಳಕ್ಕೆಯ ಹರಿಶ್ಚಂದ್ರ ಎಂಬವರ ಮಗ, 32ರ ಹರೆಯದ ಹೇಮಚಂದ್ರನಿಗೆ ವಿಧಿಯಾಟ ಗೊತ್ತಿರಲಿಲ್ಲ.

ಮೇಲ್ಭಾಗದ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಕ್ಷಣಾರ್ಧದಲ್ಲಿ ನಿಯಂತ್ರಣ ತಪ್ಪಿ ಕೆಳಭಾಗದ ರಸ್ತೆಗೆ ಉರುಳಿಬಿತ್ತು. ಆ ಕಬ್ಬಿಣದ ರಾಶಿ ಮತ್ತು ವಾಹನದ ತೂಕದ ಅಡಿಯಲ್ಲಿ ಹೇಮಚಂದ್ರ ಅಕ್ಷರಶಃ ನುಚ್ಚುನೂರಾಗಿದ್ದ. ಊರು ಜನ ಓಡಿ ಬರುವಷ್ಟರಲ್ಲಿ ಆ ಬಡಪಾಯಿ ಜೀವ ಪಕ್ಷಿ ಹಾರಿ ಹೋಗಿತ್ತು. ಜೊತೆಯಲ್ಲಿದ್ದ ಉಮ್ಮರಬ್ಬ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಮಚಂದ್ರ ಇನ್ನು ಮದುವೆಯಾಗಿರಲಿಲ್ಲ. ಅಪ್ಪ-ಅಮ್ಮನಿಗೆ ಮಗನ ಮದುವೆ ಮಾಡಬೇಕು ಅಂತ ಆಸೆ ಇತ್ತೇನೋ, ಆದರೆ ಆ ಇಡೀ ಮನೆಗೆ ಹೆಗಲಾಗಿದ್ದರು. ಇವತ್ತು ಆ ಆಧಾರ ಸ್ತಂಭವೇ ಉರುಳಿ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರ ಡೈರಿಯಲ್ಲಿ ಮತ್ತೊಂದು ಅಪಘಾತದ ರಕ್ತಸಿಕ್ತ ಕಥೆ ದಾಖಲಾಗಿದೆ.
