ಮ್ಯಾಟ್ರಿಮೋನಿ ಮಹಾಮೋಸ: ಅಳಿಯ ಕಿರಾತಕ, ಮಾವ ಮಹಾ ಪಂಟರ್! ಬೆಡ್‌ರೂಮಿಗಿಂತ ಮೊದಲು ಲಾಕಪ್‌ಗೆ ಹೋದ ʻಡ್ರೀಮ್ ಬಾಯ್’!

ಮಂಗಳೂರು: ಈ ಜಗತ್ತು ಅಂದುಕೊಂಡಷ್ಟು ಸಲೀಸಾಗಿಲ್ಲ. ನೀವು ನಿಮ್ಮ ಮನೆಯಲ್ಲಿ ನೆಮ್ಮದಿಯಾಗಿ ಮಲಗಿರುವಾಗ, ಯಾವುದೋ ಒಂದು ಮೂಲೆಯಲ್ಲಿ ಒಬ್ಬ ಕಿರಾತಕ ಇಡೀ ಸಮಾಜದ ನಂಬಿಕೆಯನ್ನು ಹರಾಜಿಗಿಟ್ಟು ಹಣ ಮಾಡುತ್ತಿರುತ್ತಾನೆ. ಮಂಗಳೂರಿನ ಕಾವೂರು ಪೊಲೀಸರು ಈಗ ಹಿಡಿದು ಕೂರಿಸಿದ್ದಾರಲ್ಲ, ಈ ಸುಶಾಂತ್ ಪೂಜಾರಿ ಮತ್ತು ಇವನಿಗೆ ಸಾಥ್ ಕೊಟ್ಟ ಆ ಭಾಸ್ಕರ… ಇವರ ಕಥೆ ಕೇಳಿದರೆ ಮನುಷ್ಯ ಸಂಬಂಧಗಳ ಮೇಲೆಯೇ ನಿಮಗೊಂದು ಅಸಹ್ಯ ಹುಟ್ಟಬಹುದು.

ಮ್ಯಾಟ್ರಿಮೋನಿ ಎಂಬ ಮಾಯಾಲೋಕ:
ಈ ಸುಶಾಂತ್ ಎಂಬ ಗಿರಾಕಿಗೆ ಮದುವೆ ಎನ್ನುವುದು ಬದುಕಿನ ದಾರಿಯಲ್ಲ, ಅದು ಹಣ ಲೂಟಿ ಮಾಡುವ ಒಂದು ಪಕ್ಕಾ ‘ಬಿಸಿನೆಸ್ ಪ್ಲ್ಯಾನ್’. ಮ್ಯಾಟ್ರಿಮೋನಿ ಸೈಟ್‌ನಲ್ಲಿ ಮುಗ್ಧ ಹೆಣ್ಣುಮಕ್ಕಳನ್ನು ಹುಡುಕುವುದು, ಅವರಿಗೆ ಮದುವೆಯ ಆಸೆ ತೋರಿಸುವುದು ಇವನ ಮೊದಲ ಹೆಜ್ಜೆ. ಆಮೇಲೆ ಶುರುವಾಗುತ್ತೆ ನೋಡಿ ಅಸಲಿ ಆಟ. ಕಳೆದ ಫೆಬ್ರವರಿಯಲ್ಲಿ ಇವನು ನವ ಮುಂಬೈನ ಘನಸೋಳಿಯಲ್ಲಿ ಒಬ್ಬ ಯುವತಿಯನ್ನು ನಂಬಿಸಿ ಮದುವೆಯಾದ. ಆಕೆಯಿಂದ ಹಂತ ಹಂತವಾಗಿ ಪೀಕಿದ್ದು ಅಕ್ಷರಶಃ ಆರು ಲಕ್ಷದ ಅರವತ್ತು ಸಾವಿರ ರೂಪಾಯಿ! ದುಡ್ಡು ಕೈ ಸೇರಿದ ಮೇಲೆ, ಕಳೆದ ನವೆಂಬರ್‌ನಲ್ಲಿ ಯಾರಿಗೂ ಹೇಳದೆ ಹಾರಿಹೋದ ಈ ʻರೋಮಿಯೋ’ನನ್ನ ಹುಡುಕುತ್ತಾ ಹೋದಾಗ ಸಿಕ್ಕ ಸತ್ಯಗಳು ಬೆಚ್ಚಿಬೀಳಿಸುವಂತಿವೆ.

ಬಾಡಿಗೆ ಮಾವನ ಭರ್ಜರಿ ಐಡಿಯಾ:
ಈ ವಂಚನೆಯ ಹಾದಿಯಲ್ಲಿ ಸುಶಾಂತ್‌ಗೆ ಒಬ್ಬ ಜನ್ಮಜಾತ ಪಂಟರ್ ಸಾಥ್ ಕೊಟ್ಟಿದ್ದ. ಅವನೇ ಈ ಮುಲ್ಕಿಯ ಭಾಸ್ಕರ. ಈ ಭಾಸ್ಕರನ ಕಳ್ಳಾಟ ಅಂತಿಂಥದ್ದಲ್ಲ. ಸುಶಾಂತ್‌ನನ್ನು ತನ್ನ ಸ್ವಂತ ʻಅಳಿಯ’ ಎಂದು ಪರಿಚಯಿಸಿ, ಮುಂಬೈನಲ್ಲಿ ಧಾರ್ಮಿಕ ವಿಧಿವಿಧಾನ ಮಾಡಿಸಿ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದ. ಅಂದರೆ, ಒಂದು ಹೆಣ್ಣಿನ ಬದುಕನ್ನು ಬಲಿ ಕೊಡಲು ಇವರು ಧರ್ಮ ಮತ್ತು ಶಾಸ್ತ್ರಗಳನ್ನು ಎಷ್ಟು ನೀಚವಾಗಿ ಬಳಸಿಕೊಂಡಿದ್ದರು?

ಊರು ಊರಲ್ಲೂ ಒಂದೊಂದು ಬಲೆ:
ಕಾವೂರು ಪೊಲೀಸರು ಇವನನ್ನು ಅತಿಥಿ ಗೃಹಕ್ಕೆ ಕಳಿಸಿದ ಮೇಲೆ ಬಾಯಿ ಬಿಟ್ಟ ಸತ್ಯಗಳು ಹತ್ತಾರು. 2021ರಲ್ಲಿ ಉಡುಪಿಯ ಯುವತಿಯನ್ನು ಮದುವೆಯಾಗಿದ್ದ. ಅದೇ ಉಡುಪಿಯಲ್ಲಿ ಇನ್ನೂ ಇಬ್ಬರು ಯುವತಿಯರಿಗೆ ಗಾಳ ಹಾಕಿ ಹಣ ದೋಚಿದ್ದ. ಬೆಂಗಳೂರು ಮತ್ತು ಮುಂಬೈನಲ್ಲಿ ತಲಾ ಇಬ್ಬರು ಹುಡುಗಿಯರಿಗೆ ಹ್ಯಾಂಡ್ ಕೊಟ್ಟಿದ್ದ.

ಕಾರ್ಕಳದಲ್ಲೂ ಇವನೊಬ್ಬ ‘ವಾಂಟೆಡ್’ ಅಳಿಯ!
ಗಮ್ಮತ್ತಿನ ವಿಷಯ ಅಂದರೆ, ಈತನ ಮೇಲೆ ಈಗಾಗಲೇ ಉರ್ವ, ಕೋಟ ಮತ್ತು ಮಹಾರಾಷ್ಟ್ರದ ಅರ್ನಾಲ್ ಠಾಣೆಗಳಲ್ಲಿ ಪೊಕ್ಸೊ (POCSO) ಅಂತಹ ಗಂಭೀರ ಕೇಸ್‌ಗಳೂ ಇವೆ.

ಮದುವೆಯ ಅಂಗಳಕ್ಕೆ ಕಾಲಿಡುವ ಮೊದಲು ಎದುರಿಗಿರುವವನು ʻರಾಮ’ನೋ ಅಥವಾ ರಾಮನ ಮುಖವಾಡ ಧರಿಸಿದ ‘ರಾವಣ’ನೋ ಎಂದು ಕೆದಕಿ ನೋಡುವುದು ನಿಮ್ಮ ಜವಾಬ್ದಾರಿ. ಮ್ಯಾಟ್ರಿಮೋನಿ ಸೈಟ್‌ನಲ್ಲಿ ಮಿಂಚುವ ಪ್ರತಿ ಫೋಟೋದ ಹಿಂದೆ ಇಂತಹ ಸುಶಾಂತ್‌ಗಳು ಹೊಂಚು ಹಾಕಿ ಕುಳಿತಿರುತ್ತಾರೆ. ಮಂಗಳೂರು ಪೊಲೀಸರು ಇವನ ಹನಿಮೂನ್ ಕನಸಿಗೆ ಸರಿಯಾಗಿಯೇ ಹ್ಯಾಂಡ್ ಕಪ್ ತೊಡಿಸಿದ್ದಾರೆ. ಆದರೆ ಈ ಸಮಾಜದಲ್ಲಿ ಇಂತಹ ʻಸೀರಿಯಲ್ ಮದುವೆ’ ಗಿರಾಕಿಗಳು ಇನ್ನೂ ಇದ್ದಾರೆ, ಹುಷಾರಾಗಿರಿ!

error: Content is protected !!