
ದೇವನಹಳ್ಳಿ: ಪ್ರಿಯಕರನಿಗಾಗಿ ಹೆಂಡತಿಯೇ ಗಂಡನನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಿ ನಾಟಕವಾಡಿ ಶವದೆದುರು ಡ್ರಾಮ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ಮಹಿಳೆ ಪುಷ್ಪಾ ಮತ್ತು ಆಕೆಯ ಪ್ರಿಯಕರ ದೇವರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಪುಷ್ಪ ಲವರ್ ದೇವರಾಜ್ಗಾಗಿ ತನ್ನ ಪತಿ ಅಶೋಕ್ (40) ನನ್ನು ಸಂಚು ರೂಪಿಸಿ ಕೊಲೆ ಮಾಡಿದ್ದಳು.

ಅಶೋಕ್ ಮೃತದೇಹ ಗ್ರಾಮದ ಸಮೀಪದ ರಸ್ತೆಯ ತಿರುವಿನಲ್ಲಿ ಪತ್ತೆಯಾಗಿದ್ದು, ಮೊದಲಿಗೆ ಇದೊಂದು ಅಪಘಾತವೆಂದು ಹೇಳಲಾಗಿತ್ತು. ಆದರೆ ಘಟನೆ ನಡೆದ ರೀತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸೂಲಿಬೆಲೆ ಪೊಲೀಸರು ತನಿಖೆ ನಡೆಸಿದಾಗ ಇದು ಪೂರ್ವಯೋಜಿತ ಕೊಲೆ ಎಂಬುದು ಬಹಿರಂಗವಾಗಿದೆ.

ಪುಷ್ಪಾ ತನ್ನ ಪ್ರಿಯಕರ ದೇವರಾಜ್ ಹಾಗೂ ಸಹಚರರಾದ ಮುನಿಂದ್ರ ಮತ್ತು ಸಿದ್ದಪ್ಪ ಅವರ ಜೊತೆ ಸೇರಿ ಸಂಚು ರೂಪಿಸಿದ್ದಳು. ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಅಶೋಕ್ರನ್ನು ಕರೆದುಕೊಂಡು ಹೋಗಿ, ಕೆರೆಯ ಬಳಿ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಶವವನ್ನು ರಸ್ತೆಯ ತಿರುವಿನಲ್ಲಿ ಬಿಸಾಡಿ ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದರು. ಸದ್ಯ, ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುಷ್ಪಾ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ಮುಂದುವರೆದಿದೆ.