
ಚಿಂತಾಮಣಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ 5 ತಿಂಗಳ ಗರ್ಭಿಣಿಯಾಗಿರುವ ಘಟನೆ ನಡೆದಿದೆ.

ಕಳೆದ 2-3 ತಿಂಗಳಿನಿಂದ ವಿದ್ಯಾರ್ಥಿನಿಯ ದೇಹದಲ್ಲಾದ ಬದಲಾವಣೆ ಗಮನಿಸಿ ಹಾಸ್ಟೆಲ್‌ನ ಮೇಲ್ವಿಚಾರಕರು ಪೋಷಕರನ್ನು ಕರೆಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ದಸರಾ ವೇಳೆ ಊರಿಗೆ ಹೋದಾಗ ಆಕೆಯ ಸೋದರ ಮಾವ (ತಾಯಿಯ ತಮ್ಮ) ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ತೇಜನಂದ ರೆಡ್ಡಿ ತಿಳಿಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ತೇಜನಂದ ರೆಡ್ಡಿ ಆಗಮಿಸಿ ಪರಿಶೀಲಿಸಿ, ವರದಿ ಪಡೆದರು. ಈ ಬಗ್ಗೆ ಸಂಪೂರ್ಣ ವರದಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಸರ್ಕಾರಕ್ಕೂ ಸಲ್ಲಿಸಿದ್ದೇವೆ ಎಂದರು.