
ಬೆಳಗಾವಿ: ಚಲಿಸುತ್ತಿದ್ದ ಲಾರಿ ಏರಿ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯ ಶಂಕರಾನಂದ ಪುತ್ಥಳಿ ಬಳಿ ನಡೆದಿದೆ.

ರುಕ್ಮಿಣಿ ನಗರದ ನಿವಾಸಿ ಅಯಾಜ್ ಸವಣೂರ(36) ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಎಂಟು ಜನರಿಂದ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ.
ಹಿಂಡಲಗಾ ಬಳಿ ಅಯಾಜ್ ಆಕ್ಸಿಡೆಂಟ್ ಮಾಡಿ ಲಾರಿ ನಿಲ್ಲಿಸದೇ ಬಂದ ಕಾರಣ, ಬೆನ್ನುಹತ್ತಿ ಬಂದು ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಲಾರಿ ಚಾಲಕ ಅಯಾಜ್ ಸವಣೂರ ತೊಡೆ, ಕಿವಿ, ಬೆನ್ನು ಮತ್ತು ತಲೆ ಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಮನಬಂತೆ ಇರಿದಿದ್ದು, ಲಾರಿ ಮೇಲೂ ಕಲ್ಲು ತೂರಾಟ ನಡೆಸಿ, ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ. ಗಂಭೀರ ಗಾಯಗೊಂಡ ಅಯಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಘಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸರ ತಂಡ ಮತ್ತು ಸೋಕೋ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.