
ರಾಯಚೂರು: ಹೆತ್ತ ತಾಯಿಯನ್ನೇ ಅಟ್ಟಾಡಿಸಿ, ಆಕೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಜಕ್ಕೇರು ತಾಂಡಾದಲ್ಲಿ ನಡೆದಿದೆ.
ಚಂದವ್ವ (45) ಮೃತ ಮಹಿಳೆಯಾಗಿದ್ದು, ಆಕೆಯ ಮೊದಲ ಪುತ್ರ ಕುಮಾರ ಬಂಧಿತ ಆರೋಪಿ.

ಚಂದವ್ವಗೆ ಒಟ್ಟು 6 ಜನ ಮಕ್ಕಳು. ಆ ಪೈಕಿ 4 ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗ ಕುಮಾರ್ ಗೆ ಮದುವೆಯಾಗಿದೆ. ಮತ್ತೋರ್ವ ಪುತ್ರ ಸಂತೋಷ್ ಎಂಬಾಂತ ಇದೇ ಜಕ್ಕೇರು ತಾಂಡಾದಲ್ಲಿ ಜೆಸಿಬಿ ಆಪರೇಟರ್ ಆಗಿದ್ದರೆ, ಮೊದಲ ಮಗ ಕುಮಾರ್ ಹೆಂಡತಿ ಮತ್ತು ಮಕ್ಕಳ ಜೊತೆ ಬೆಂಗಳೂರಲ್ಲಿ ನೆಲೆಸಿದ್ದ. ಆದರೆ ಈತ ಕುಡಿದು ಗಲಾಟೆ ಮಾಡೋದು ಮಾಡುತ್ತಿದ್ದ.

ಈ ಮಧ್ಯೆ ಇತ್ತೀಚೆಗೆ ಬೆಂಗಳೂರಿನಿಂದ ಜಕ್ಕೇರು ತಾಂಡಾ ಗ್ರಾಮಕ್ಕೆ ಬಂದಿದ್ದ ಕುಮಾರ್, ತಾಯಿ ಚಂದವ್ವ ಜೊತೆ 2 ಲಕ್ಷ ಹಣ ಕೊಡು ಎಂದು ಪೀಡಿಸುತ್ತಿದ್ದ. ಆಕೆ ಕೊಡದೇ ಇದ್ದಾಗ ಮನೆ ಮಾಳಿಗೆಯ ಶೀಟ್ ಒಡೆದು ಹಾಕಿ ದೊಡ್ಡ ಗಲಾಟೆ ಕೂಡ ಮಾಡಿದ್ದ ಎನ್ನಲಾಗಿದೆ. ಜಮೀನು ಮಾರಿಯಾದರೂ ಹಣ ಕೊಡು ಎಂದು ಹೇಳಿದ್ದ ಆತ, ನಿನ್ನೆವರೆಗೆ ಆಕೆಗೆ ಡೆಡ್ ಲೈನ್ ಕೂಡ ಕೊಟ್ಟಿದ್ದ. ನಿನ್ನೆ(ಜ.26) ಸಂಜೆ ತಾಯಿ ಜೊತೆ ಮತ್ತೆ ಹಣಕ್ಕಾಗಿ ವಾಗ್ವಾದ ನಡೆಸಿ ಆಕೆಯನ್ನ ಎಳೆದಾಡಿ ಹೊಡೆದಿದ್ದ. ಬಳಿಕ ಕೂದಲು ಹಿಡಿದು ಎಳೆದೊಯ್ದು ಮನೆ ಪಕ್ಕದ ಸೇವಾಲಾಲ್ ಭವನದ ಕಟ್ಟಡದ ಬಳಿ ಬಿಸಾಡಿದ್ದ. ಈ ವೇಳೆ ತಲೆಗೆ ಗಂಭೀರ ಪೆಟ್ಟಾಗಿ ಚಂದವ್ವ ಕುಸಿದಿದ್ದು, ಆಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುಮಾರ್ ಹತ್ಯೆಗೈದಿದ್ದಾನೆ.
ಘಟನೆ ಸಂಬಂಧ ಆರೋಪಿ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.