ಮೊರಾದಾಬಾದ್: ಆತ ಒಬ್ಬ ಇಂಜಿನಿಯರ್. ಬುದ್ಧಿವಂತ ತಲೆ. ಅಮ್ಮ ಇನ್ಶೂರೆನ್ಸ್ ಕಂಪೆನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್. ಜೊತೆಗೊಬ್ಬಳು ಅವಳಿ ತಂಗಿ, ಅವಳೂ ಇಂಜಿನಿಯರ್. ಸುಂದರ ಸಂಸಾರ, ನಗುನಗುತ್ತಾ ಇರಬೇಕಾದ ಮನೆ. ಆದರೆ ಆ ಮನೆಯಲ್ಲಿ ಕಳೆದ ವಾರ ನಡೆದದ್ದು ಮಾತ್ರ ಯಾವ ಹಾರರ್ ಸಿನಿಮಾಕ್ಕೂ ಕಮ್ಮಿಯಿಲ್ಲದ ಕ್ರೌರ್ಯದ ಪರಮಾವಧಿ!

ಹಾರ್ದಿಕ್ ಮತ್ತು ಹಿಮಾಶಿಖಾ ಇಬ್ಬರೂ ಅವಳಿ ಜವಳಿಗಳು. ಗುರಗಾಂವ್‌ನಲ್ಲಿ ಕೈತುಂಬಾ ಸಂಬಳ ಬರುವ ಇಂಜಿನಿಯರ್ ಕೆಲಸ ಮಾಡುತ್ತಿದ್ದರು. ಆದರೆ ವರ್ಷದ ಹಿಂದೆ ಹಾರ್ದಿಕ್ ಕೆಲಸ ಬಿಟ್ಟಿದ್ದ. ಅತ್ತ ತಂಗಿ ಇಂಜಿನಿಯರಿಂಗ್ ಜೊತೆ ಎಂ.ಬಿ.ಎ ಕೂಡ ಓದುತ್ತಾ ಬದುಕಿನ ಏಣಿ ಏರುತ್ತಿದ್ದರೆ, ಇತ್ತ ಹಾರ್ದಿಕ್ ಮಾತ್ರ ಸೋಷಿಯಲ್ ಮೀಡಿಯಾ ಎಂಬ ಮಾಯಾಲೋಕದಲ್ಲಿ ಮುಳುಗಿದ್ದ. ಪುಣೆಯ ಮುಸ್ಲಿಂ ಯುವತಿಯೊಬ್ಬಳ ಜೊತೆ ಪ್ರೇಮಪಾಶಕ್ಕೆ ಸಿಲುಕಿದ್ದ ಹಾರ್ದಿಕ್, ಹಗಲಿರುಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದ.

ಮಾರ್ಚ್ 6ರ ಆ ಸಂಜೆ ಮನೆಯಲ್ಲಿ ಕಿಚ್ಚು ಹತ್ತಿಕೊಂಡಿತು. “ಕೆಲಸ ಬಿಟ್ಟು ಹೀಗೆ ಕುಳಿತರೆ ಹೇಗೆ? ಸ್ವಲ್ಪ ಬದುಕಿನ ಬಗ್ಗೆ ಗಮನ ಕೊಡು, ಈ ಪ್ರೇಮದ ಹುಚ್ಚು ಬಿಡು” ಎಂದು ತಾಯಿ ನೀಲಿಮಾ ಮತ್ತು ತಂಗಿ ಹಿಮಾಶಿಖಾ ಹಿತವಚನ ಹೇಳಿದ್ದರು. ಅದುವರೆಗೂ ಒಳಗೇ ಕುದಿಯುತ್ತಿದ್ದ ಹಾರ್ದಿಕ್‌ನ ಆಕ್ರೋಶ ಅಂದು ಕಟ್ಟೆಯೊಡೆಯಿತು. ಕೈಗೆ ಸಿಕ್ಕ ತರಕಾರಿ ಕೊಯ್ಯುವ ಚಾಕು ಹಿಡಿದು ತಂಗಿಯ ಮೇಲೆ ಮುಗಿಬಿದ್ದ.

84 ಇರಿತಗಳು!:
ಅವನು ಚಾಕುವಿನಿಂದ ಇರಿಯುತ್ತಿದ್ದರೆ ಅಲ್ಲಿ ತಂಗಿಯ ಬದಲು ಅವನಿಗೆ ತನ್ನ ಬದುಕಿಗೆ ಅಡ್ಡ ಬರುತ್ತಿದ್ದ ಶತ್ರುವಿನಂತೆ ಕಾಣುತ್ತಿದ್ದಳು. ಪೋಸ್ಟ್‌ಮಾರ್ಟಂ ರಿಪೋರ್ಟ್ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹಿಮಾಶಿಖಾಳ ದೇಹದ ಮೇಲೆ ಒಂದಲ್ಲ, ಎರಡಲ್ಲ ಬರೋಬ್ಬರಿ 84 ಚಾಕು ಇರಿತದ ಗುರುತುಗಳಿದ್ದವು! ರಕ್ತದ ಮಡುವಿನಲ್ಲಿ ತಂಗಿ ಬಿದ್ದ ಮೇಲೆ ಹಾರ್ದಿಕ್ ಅಲ್ಲಿಗೆ ನಿಲ್ಲಲಿಲ್ಲ.

ಅಮ್ಮನಿಗೆ ಕಾದಿತ್ತು ಘೋರ ʻಸರ್ಪ್ರೈಸ್’:
ನೇರವಾಗಿ ಅಮ್ಮ ಕೆಲಸ ಮಾಡುತ್ತಿದ್ದ ಇನ್ಶೂರೆನ್ಸ್ ಆಫೀಸಿಗೆ ಹೋದ. ಮುಖದಲ್ಲಿ ಯಾವ ಆತಂಕವೂ ಇರಲಿಲ್ಲ. “ಮಮ್ಮಿ, ಮನೆಗೆ ಬಾ ನಿನಗೊಂದು ಸರ್ಪ್ರೈಸ್ ಇಟ್ಟಿದ್ದೇನೆ” ಎಂದು ಕರೆದೊಯ್ದ. ಮನೆಗೆ ಬಂದು ಬಾಗಿಲು ತೆಗೆದ ನೀಲಿಮಾ ಎದುರು ಬಿದ್ದಿದ್ದು ರಕ್ತದ ಕೋಡಿಯಲ್ಲಿ ಮಲಗಿದ್ದ ಮಗಳು! ಅವಳು ಕಿರುಚುವಷ್ಟರಲ್ಲಿ ಹಾರ್ದಿಕ್ ಅವಳ ಮೇಲೆಯೂ ಅಟ್ಯಾಕ್ ಮಾಡಿದ. ಅದೃಷ್ಟವಶಾತ್ ನೀಲಿಮಾ ಸಾವಿನ ದವಡೆಯಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೋಲೀಸ್ ಇಂಟರೋಗೇಷನ್‌ನಲ್ಲಿ ಆತ ಹೇಳಿದ ಮಾತು ಕೇಳಿದರೆ ನಾಗರಿಕ ಸಮಾಜ ತಲೆತಗ್ಗಿಸಬೇಕು. “ಯಾವಾಗಲೂ ಕೆರಿಯರ್ ಬಗ್ಗೆ ಪಾಠ ಮಾಡ್ತಾ ಇದ್ದರು, ನನ್ನ ಪ್ರೇಮಕ್ಕೆ ಅಡ್ಡ ಬಂದರು, ಅದಕ್ಕೆ ಮುಗಿಸಿಬಿಟ್ಟೆ” ಎಂದು ಕೂಲಾಗಿ ಹೇಳಿದ್ದಾನೆ.
ಸೋಶಿಯಲ್ ಮೀಡಿಯಾದ ಹುಚ್ಚು ಮತ್ತು ಕ್ಷಣಿಕ ಆವೇಶ ಹೇಗೆ ಒಂದು ಸುಂದರ ಸಂಸಾರವನ್ನು ಸ್ಮಶಾನ ಮಾಡಬಲ್ಲದು ಎಂಬುದಕ್ಕೆ ಈ ‘ಮೊರಾದಾಬಾದ್ ಮರ್ಡರ್’ ಕನ್ನಡಿ ಹಿಡಿದಿದೆ.