ನೈಲ್ ಪಾಲಿಷ್ ನಿಂದ ಹೊರಹೊಮ್ಮುವ ವಿಶಿಷ್ಟ ವಾಸನೆಗೆ ಕಾರಣವೇನು ಗೊತ್ತೇ? ಅದರಿಂದಾಗಿ ಉಂಟಾಗುವ ಪರಿಣಾಮವೇನು..?!

ನೈಲ್‌ ಪಾಲಿಷ್‌ ನಲ್ಲಿ ಕಾಣಸಿಗುವ ಆ ರಂಗುರಂಗಿನ ಬಣ್ಣಗಳು ಎಂಥವರನ್ನೇ ಆದರೂ ಸೆಳೆದುಕೊಳ್ಳುತ್ತದೆ… ಮಹಿಳೆಯರ ಮನ ಸೆಳೆಯುವ ವಸ್ತುಗಳಲ್ಲಿ ಇದೂ ಕೂಡ ಒಂದು ಎಂದರೂ ತಪ್ಪಾಗಲಾರದು. ಹಾಗೆಯೇ ಅದನ್ನ ಹಚ್ಚುವಾಗ ಬರುವ ಆ ಒಂದು ವಿಶಿಷ್ಟ ವಾಸನೆ ಎಲ್ಲರಿಗೂ ತಿಳಿದಿರಬಹುದು. ಆದರೆ ಸಾಮಾನ್ಯವಾಗಿ ಯಾರಿಗೂ ಕೂಡ ಇದಕ್ಕೆ ಕಾರಣವೇನು ಎಂಬುದು ತಿಳಿದಿರಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಟೊಲ್ಯೂನ್. ಇದು ಉಗುರಿನ ಮೇಲೆ ಹಚ್ಚಿದ ಬಣ್ಣವು ನಯವಾಗಿ ಹರಡಲು ಮತ್ತು ಅತಿ ವೇಗವಾಗಿ ಒಣಗಲು ಸಹಾಯ ಮಾಡುತ್ತದೆ.

ಟೊಲ್ಯೂನ್ ಕಾಸ್ಮೆಟಿಕ್ ಜಗತ್ತಿನ ಒಬ್ಬ ‘ಗುಪ್ತಚರ’ ಇದ್ದಂತೆ. ಟೊಲ್ಯೂನ್ ಅತಿ ಬೇಗನೆ ಆವಿಯಾಗುವ ಗುಣ ಹೊಂದಿದೆ. ನೀವು ನೈಲ್ ಪಾಲಿಷ್ ಹಚ್ಚುವಾಗ ಆ ಆವಿಯನ್ನು ಉಸಿರಾಡಿದರೆ, ಅದು ನೇರವಾಗಿ ಶ್ವಾಸಕೋಶದ ಮೂಲಕ ಅತಿ ವೇಗವಾಗಿ ರಕ್ತವನ್ನು ಸೇರುತ್ತವೆ. ಇವು ಕೊಬ್ಬಿನಲ್ಲಿ ಕರಗುವ ಗುಣ ಹೊಂದಿರುವುದರಿಂದ, ನಮ್ಮ ಮೆದುಳಿನ ರಕ್ಷಣಾ ಕವಚವನ್ನು ಸುಲಭವಾಗಿ ಭೇದಿಸಿ ಒಳಗೆ ನುಗ್ಗುತ್ತವೆ. ಮೆದುಳನ್ನು ಸೇರಿದ ಈ ಅನಿಲಗಳು ಕೇಂದ್ರ ನರಮಂಡಲದ ವೇಗವನ್ನು ತಗ್ಗಿಸುತ್ತವೆ.

ಕೆಲವರಿಗೆ ನೇಲ್ ಪಾಲಿಷ್ ಹಚ್ಚಿದ ತಕ್ಷಣ ಸ್ವಲ್ಪ ತಲೆ ಹಗುರಾದಂತೆ, ವಿಚಿತ್ರ ಖುಷಿ ಅಥವಾ ಪ್ರಪಂಚವೇ ಮರೆತಂತೆ ವಿಚಿತ್ರವಾದ ಸಂಭ್ರಮ ಉಂಟಾಗುವುದು ಇದೇ ಕಾರಣಕ್ಕೆ! ಇದನ್ನೇ ‘ಇನ್ಹೇಲಂಟ್’ ನಶೆ ಎನ್ನಲಾಗುತ್ತದೆ. ಇದು ಬಹಳ ಅಲ್ಪಕಾಲ ಇರುತ್ತದೆ. ಅದಕ್ಕಾಗಿಯೇ ಜನರು ಪದೇ ಪದೇ ಆ ವಾಸನೆಯನ್ನು ನೋಡಲು ಬಯಸುತ್ತಾರೆ, ಇದು ಕ್ರಮೇಣ ವ್ಯಸನವಾಗಿ ಬದಲಾಗುತ್ತದೆ.

ಅಸಿಟೋನ್ ಮತ್ತು ಟೊಲ್ಯೂನ್ ವಾಸನೆಗೆ ಮಾರುಹೋಗುವವರ ಸಂಖ್ಯೆ ದೊಡ್ಡದಿದೆ. ಆದರೆ ಹೆಚ್ಚು ಕಾಲ ಇದರ ಸಹವಾಸ ಮಾಡಿದರೆ ನೆನಪಿನ ಶಕ್ತಿ ಕುಂದುವುದು ಮತ್ತು ನರಗಳ ದೌರ್ಬಲ್ಯ ಉಂಟಾಗಬಹುದು. ಈ ರಾಸಾಯನಿಕಗಳು ನರಗಳ ಸುತ್ತಲಿರುವ ರಕ್ಷಣಾತ್ಮಕ ಪದರವಾದ ‘ಮೈಲಿನ್’ ಅನ್ನು ಕರಗಿಸಬಲ್ಲವು. ಇದರಿಂದ ಮೆದುಳು ನೀಡುವ ಸಂದೇಶಗಳು ದೇಹದ ಇತರ ಭಾಗಗಳಿಗೆ ತಲುಪಲು ತಡವಾಗುತ್ತದೆ.\

ಕೆಲವು ಇನ್ಹೇಲಂಟ್‌ಗಳು ಹೃದಯ ಬಡಿತವನ್ನು ಅಸ್ತವ್ಯಸ್ತಗೊಳಿಸಿ ‘ಸಡನ್ ಸ್ನಿಫಿಂಗ್ ಡೆತ್’ ಎಂಬ ಅಪಾಯಕ್ಕೂ ಕಾರಣವಾಗಬಹುದು. ಇದನ್ನು “ಸದ್ದಿಲ್ಲದ ಕೊಲೆಗಾರ” ಎಂದು ಕೂಡ ಕರೆಯುತ್ತಾರೆ. ಹೀಗಾಗಿ ಸೌಂದರ್ಯವರ್ಧಕಗಳ ಲೋಕದಲ್ಲಿ ‘ಟಾಕ್ಸಿಕ್ ಟ್ರಯೋ’ ಅಥವಾ ‘ಮೂರು ವಿಷಕಾರಿ ರಕ್ಕಸರು’ ಎಂದು ಹೆಸರಾದ; DBP, Formaldehyde, Toluene ಈ ಅಂಶಗಳಿಲ್ಲದ ವಸ್ತುಗಳನ್ನು ಕೊಂಡುಕೊಳ್ಳುವುದು ಉತ್ತಮ.

​ಹೆಚ್ಚಿನ ಜಾಗೃತ ಗ್ರಾಹಕರು ಈಗ “3-Free” ಅಥವಾ “5-Free” ಎಂದು ಬರೆದಿರುವ ನೇಲ್ ಪಾಲಿಷ್‌ಗಳನ್ನು ಹುಡುಕುತ್ತಾರೆ. ಇದರರ್ಥ ಆ ಉತ್ಪನ್ನಗಳಲ್ಲಿ ಟೊಲ್ಯೂನ್ ಇಲ್ಲ ಎಂದು. ಗರ್ಭಿಣಿಯರು ಟೊಲ್ಯೂನ್ ಇರುವ ಉತ್ಪನ್ನಗಳಿಂದ ದೂರವಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ, ಏಕೆಂದರೆ ಇದು ಭ್ರೂಣದ ಬೆಳವಣಿಗೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆಯನ್ನು ಹೊಂದಿರುತ್ತದೆ.

error: Content is protected !!