ಮಂಗಳೂರು: ಬಿಜಪಿಯವರು ದ್ವೇಷ ಭಾಷಣ ಮಾಡ್ತಾರಾ? ಬಿಜೆಪಿಯವರಿಗೆ ದ್ವೇಷ ಭಾಷಣ ಮಸೂದೆ ಬಗ್ಗೆ ಯಾಕೆ ಭಯ ಅಂತಾನೆ ಗೊತ್ತಾಗ್ತಾ ಇಲ್ಲ. ಈ ಮಸೂದೆ ಪಕ್ಷ, ಸಂಘಟನೆ, ವ್ಯಕ್ತಿ ಹೀಗೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಗಣಾರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿ, ಮಾಧ್ಯಮದವರು, ಮಸೂದೆ ಜಾರಿಯಾಗುವ ಮುನ್ನವೇ ಪೊಲೀಸರು ನೋಟೀಸ್ ನೀಡಿದ್ದು ಸರಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸುಳ್ಳು ಸುದ್ದಿ ಸೃಷ್ಟಿಸುವುದು, ನಿಜಾಂಶ ಬರುವ ಮುನ್ನವೇ ಅಭಿಪ್ರಾಯ ವ್ಯಕ್ತಪಡಿಸುವುದು, ಜನರನ್ನು ಪ್ರಚೋದನಕಾರಿಯಾಗಿ ಕೆರಳಿಸುವುದು ಇದು ಸಮಾಜ ಒಡೆಯುವ ಕೆಲಸ. ಅದನ್ನು ನಿಯಂತ್ರಣ ಮಾಡ್ಬೇಕು ಅಲ್ವಾ? ಬಿಜೆಪಿಗೆ ಯಾಕೆ ಭಯ? ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ವಿರುದ್ಧ ಎಷ್ಟೆಲ್ಲಾ ದಬ್ಬಾಳಿಕೆ ಮಾಡ್ತಾ ಇದೆ. ಆದರೆ ನರೇಂದ್ರ ಮೋದಿ, ಅಮಿತ್ ಶಾ ತರ ದ್ವೇಷ ಸಾಧಿಸುತ್ತಿಲ್ಲ ಎಂದರು.

ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಅವರ ಕೆಲಸ ಮಾಡುತ್ತಾರೆ. ಅದು ಅವರ ಹಕ್ಕು. ರಾಜ್ಯ ಸರ್ಕಾರದ ಪ್ರತಿನಿಧಿ. ಅವರ ಭಾಷಣ ಆಗಲ್ಲ ಎನ್ನುವಂತಿಲ್ಲ. ಆ ಭಾಷಣ ಸರ್ಕಾರ್ ಅಭಿಪ್ರಾಯವಾಗಿರುತ್ತದೆ. ರಾಜ್ಯ ಬೆಳವಣಿಗೆ ಸಮಸ್ಯೆಗಳ ಪ್ರಸ್ತಾಪವಿರುತ್ತದೆ. ರಾಜ್ಯಪಾಲರಿಗೆ ಇದು ಸಂವಿಧಾನ ನೀಡಿದ ಅವಕಾಶ. ಸರ್ಕಾರದ ಅಭಿಪ್ರಾಯ ಹೇಳುವಂಥದ್ದು. ಆದರೆ ಬಿಜೆಪಿಯೇತರ ರಾಜ್ಯದಲ್ಲಿ ರಾಜ್ಯಪಾಲರ ನಡೆ ಸಂಶಯದಿಂದ ಕೂಡಿದೆ. ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಲಾಗುತ್ತದೆ. ಕೇಂದ್ರ ಸರ್ಕಾರದ ಕಪಿಮಷ್ಠಿಯಲ್ಲಿ, ಅವರ ಮಾರ್ಗದರ್ಶನದಲ್ಲಿ ಇದೆಲ್ಲಾ ನಡೆಯುತ್ತೆ. ಇಂದು ಸಂವಿಧಾನದ ರಚನೆ ದಿನ. ಆದರೆ ಅದರ ಆಶಯ ಧಿಕ್ಕರಿಸುವ ಕೆಲಸ ನಡೆಯುತ್ತಿದೆ ಇದು ಸರಿಯಲ್ಲ ಎಂದರು.

ಸರ್ಕಾರ ಪತನಗೊಂಡು, ನಾನೇ ಸಿಎಂ ಆಗುತ್ತೇನೆ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಅಂತ ಬಿಜೆಪಿಯವರೇ ಹೇಳಲಿ ಅಥವಾ ವಿಜಯೇಂದ್ರ, ಆರ್. ಅಶೋಕ್ ಅಥವಾ ಯಡಿಯೂರಪ್ಪ ಹೇಳಲಿ. ಬಿಜೆಪಿಯವರು ಇದಕ್ಕೆ ತಯಾರಿದ್ದಾರಾ? ಜೆಡಿಎಸ್‌ನವರು ಏನು ಬೇಕಾದ್ರೂ ಹೇಳಿಕೊಂಡು ಬರ್ಬಹುದು, ಇದಕ್ಕೆ ಬಿಜೆಪಿಯವರು ಒಪ್ಪಬೇಕಲ್ವಾ? ಎಂದರು.