ಬೆಂಗಳೂರು/ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಗುಂಡೇಟು ಪ್ರಕರಣ ಮಾಸುವ ಮುನ್ನವೇ, ಬಳ್ಳಾರಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಜಿ–ಸ್ಟಾರ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಆರೋಪ–ಪ್ರತ್ಯಾರೋಪಕ್ಕೆ ವೇದಿಕೆ ಸೃಷ್ಟಿಸಿದೆ.
ಕಂಟೋನ್ಮೆಂಟ್ ಪ್ರದೇಶದ ತಮ್ಮ ಮಾಲೀಕತ್ವದ ಜಿ–ಸ್ಟಾರ್ ಲೇಔಟ್‌ನಲ್ಲಿ ಜನಾರ್ದನ ರೆಡ್ಡಿ ಸುಮಾರು 73 ಕೋಟಿ ರೂ. ವೆಚ್ಚದಲ್ಲಿ ಈ ಮಾಡೆಲ್ ಹೌಸ್ ನಿರ್ಮಿಸಿದ್ದರು. ಲೇಔಟ್‌ನಲ್ಲಿ ಮನೆ ಖರೀದಿಗೆ ಬರುವ ಗ್ರಾಹಕರಿಗೆ ಮಾದರಿಯಾಗಿ ತೋರಿಸುವ ಉದ್ದೇಶದಿಂದ ಈ ಮನೆ ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ ಸ್ಥಳಕ್ಕೆ ತೆರಳಿದ ದುಷ್ಕರ್ಮಿಗಳು ಮಾಡೆಲ್ ಹೌಸ್‌ನ ಬಾಗಿಲು, ಕಿಟಕಿಗಳನ್ನು ಮುರಿದು, ಗಾಜುಗಳನ್ನು ಒಡೆದು ಹಾಕಿ, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ, ಅದಾಗಲೇ ಮನೆಗೆ ಭಾರೀ ಹಾನಿ ಸಂಭವಿಸಿದೆ. ಕಿಟಕಿಗಳು, ಕಂಬಗಳು ಸೇರಿದಂತೆ ಕಟ್ಟಿಗೆಯಿಂದ ನಿರ್ಮಿಸಲಾದ ಅನೇಕ ವಸ್ತುಗಳು ಅಗ್ನಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದನೆಂದು ಶಂಕಿಸಲಾದ ಯುವಕನ ಫೋಟೋವನ್ನು ಮಾಧ್ಯಮಗಳಿಗೆ ಪೊಲೀಸರು ಪ್ರದರ್ಶಿಸಿದರು. ಬಳ್ಳಾರಿಯಲ್ಲಿ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದ 23 ದಿನಗಳ ಬಳಿಕ ಈ ಘಟನೆ ಸಂಭವಿಸಿರುವುದು, ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ ಸಹೋದರ ಹಾಗೂ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, “ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರೇ ಈ ಕೃತ್ಯದ ಹಿಂದೆ ಇದ್ದಾರೆ. ಬ್ಯಾನರ್ ಗಲಾಟೆ ವೇಳೆ ಜನಾರ್ದನ ರೆಡ್ಡಿಯ ಮನೆಗೆ ಬೆಂಕಿ ಹಚ್ಚುವುದಾಗಿ ಅವರು ಬೆದರಿಕೆ ಹಾಕಿದ್ದರು. ಅದು ಸಾಧ್ಯವಾಗದ ಕಾರಣ, ಬೆಂಬಲಿಗರ ಮೂಲಕ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿಸಿದ್ದಾರೆ” ಎಂದು ತೀವ್ರವಾಗಿ ಆರೋಪಿಸಿದರು.

ರೆಡ್ಡಿ ಕುಟುಂಬದ ಆಸ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಈ ಕೃತ್ಯದ ಹಿಂದೆ ಯಾರು ಇದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಎಸ್ಪಿಗೆ ದೂರು ನೀಡುವುದಾಗಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಅವರು ಬೆಂಗಳೂರಿನಲ್ಲಿ ಇದ್ದು, ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಳ್ಳಾರಿ ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಸಂಬಂಧ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.