ಬೈಂದೂರು ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಪಕ್ಷದಿಂದಲೇ ಉಚ್ಛಾಟನೆ!

ಬೈಂದೂರು: ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿ ಬೈಂದೂರು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಪಕ್ಷದ ಜಿಲ್ಲಾ ಮುಖಂಡರ ಸ್ಪಷ್ಟ ಹಾಗೂ ಪುನಃ ಪುನಃ ನೀಡಲಾದ ಸೂಚನೆಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಿ, ಪಕ್ಷದ ಅಧಿಕೃತ ವೇದಿಕೆಯನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಪಕ್ಷದ ಘನತೆ, ಶಿಸ್ತು ಹಾಗೂ ಏಕತೆಯನ್ನು ಗಂಭೀರವಾಗಿ ಹಾನಿಗೊಳಪಡಿಸಿರುವುದು ಪಕ್ಷದ ಗಮನಕ್ಕೆ ಬಂದಿದೆ. ಪಕ್ಷದ ನೇತೃತ್ವದ ವಿರುದ್ಧ ನಿರಂತರವಾಗಿ ಅವಮಾನಕಾರಿಯಾಗಿ ಮಾತನಾಡುತ್ತಾ, ಪಕ್ಷದ ಕಾರ್ಯಕರ್ತ ರಲ್ಲಿ ಗೊಂದಲ, ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ಉಂಟುಮಾಡಿರುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದ್ದು, ಈ ವರ್ತನೆ ಪಕ್ಷದ ನಿಯಮಾವಳಿ ಮತ್ತು ಆಂತರಿಕ ಶಿಸ್ತಿಗೆ ಸಂಪೂರ್ಣ ವಿರೋಧವಾಗಿದೆ.

ಈ ಎಲ್ಲಾ ಅಶಿಸ್ತಿನ, ಜವಾಬ್ದಾರಿಯಿಲ್ಲದ ಹಾಗೂ ಪಕ್ಷವಿರೋಧಿ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಉನ್ನತ ನಾಯಕತ್ವದ ಆದೇಶದ ಮೇರೆಗೆ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗುತ್ತಿದೆ ಎಂದು ಈ ಮೂಲಕ ಅಂತಿಮವಾಗಿ ತಿಳಿಸಲಾಗುತ್ತದೆ ಎಂದು ದೀಪಕ್ ಕುಮಾರ್ ಶೆಟ್ಟಿಗೆ ನೋಟೀಸ್‌ ಕಳಿಸಲಾಗಿದೆ.

ದೀಪಕ್‌ ಕುಮಾ‌ರ್ ಶೆಟ್ಟಿ ಉಚ್ಚಾಟನೆಗೆ ಪ್ರಮುಖ ಕಾರಣ ಬೈಂದೂರು ಶಾಸಕರು ಮತ್ತು ಇವರ ನಡುವಿನ ಆಂತರಿಕ ವೈಮನಸ್ಸು ಕೂಡಾ ಕಾರಣ ಎನ್ನಲಾಗಿದೆ. ಇತ್ತೀಚೆಗೆ ದೀಪಕ್ ಕುಮಾರ್ ಶೆಟ್ಟಿಯವರು ಗ್ರಾಮೀಣ ಭಾಗದ ನ್ಯಾಯ ಓದಗಿಸಲು ಹೋರಾಟ ಆರಂಭಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿರುವುದು ಅವರ ಉಚ್ಛಾಟಣೆಗೆ ಕಾರಣ ಎನ್ನಲಾಗುತ್ತಿದೆ.

error: Content is protected !!