ಮಂಗಳೂರು: ಇದು ಕೇವಲ ಒಂದು ಸಿನಿಮಾ ಬಿಡುಗಡೆಯಲ್ಲ, ತುಳು ಸಿನಿಮಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದಲ್ಲದೆ ತುಳು ಸಿನಿಮಾ ಪ್ರೇಮಿಗಳು ನಿಬ್ಬೆರಗಾಗುವಷ್ಟರ ಮಟ್ಟಿಗೆ ಸಂಚಲನ ಸೃಷ್ಟಿಸಿದೆ.

ಹೌದು! ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ತುಳು ಸಿನಿಮಾ ‘ನಾನ್‌ವೆಜ್’ ತುಳು ಸಿನಿಮಾ ಫೆಬ್ರವರಿ 6ರಂದು ಕರಾವಳಿ ಜಿಲ್ಲೆಯಾದ್ಯಂತ ಭರ್ಜರಿ ಬಿಡುಗಡೆಯಾಗುತ್ತಿದ್ದು, ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ ₹99 ಟಿಕೆಟ್ ದರ ನಿಗದಿ ಮಾಡುವ ಮೂಲಕ ಇಡೀ ತುಳು ಚಿತ್ರರಂಗದ ಗಮನ ಸೆಳೆದಿದೆ.

ಇದುವರೆಗೆ ಮಲ್ಟಿಪ್ಲೆಕ್ಸ್‌ಗಳು ತುಳು ಸಿನಿಮಾ ಪ್ರೇಮಿಗಳಿಂದ ದೂರವಿತ್ತು. ಆದರೆ ‘ನಾನ್‌ವೆಜ್’ ಆ ಸಂಪ್ರದಾಯವನ್ನೇ ಮುರಿದು, ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ತುಳು ಸಿನಿಮಾ ಪ್ರದರ್ಶನ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದು ಪ್ರೇಕ್ಷಕರಿಗೆ ಮಾತ್ರವಲ್ಲ, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರಿಗೂ ಹೊಸ ದಿಕ್ಕು ತೋರಿಸುವ ಹೆಜ್ಜೆಯಾಗಿದೆ ಎಂಬ ಸರ್ವತ್ರ ಅಭಿಪ್ರಾಯ ವ್ಯಕ್ತವಾಗಿದೆ.

ದುಬಾರಿ ಟಿಕೆಟ್ ದರದಿಂದ ಸಿನಿಮಾ ಮಂದಿರದಿಂದ ದೂರ ಉಳಿದಿದ್ದ ಸಾಮಾನ್ಯ ಪ್ರೇಕ್ಷಕರನ್ನೇ ಗುರಿಯಾಗಿಸಿಕೊಂಡು ನಿರ್ಮಾಪಕರು ಕೈಗೊಂಡಿರುವ ಈ ಗಟ್ಟಿ ನಿರ್ಧಾರ, ತುಳು ಸಿನಿಮಾವನ್ನು ಜನಸಾಮಾನ್ಯರ ಹತ್ತಿರ ತರುವ ಕ್ರಾಂತಿಕಾರಿ ಪ್ರಯತ್ನ ಎಂದು ಚಿತ್ರರಂಗದ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕರಾವಳಿಯ ಪ್ರತಿಭೆಗಳೇ ಸೇರಿ ರೂಪಿಸಿರುವ ‘ನಾನ್‌ವೆಜ್’ ವಿಭಿನ್ನ ಕಥಾವಸ್ತು, ಹಾಸ್ಯಭರಿತ ನಿರೂಪಣೆ ಹಾಗೂ ಬಲವಾದ ಸಂದೇಶವನ್ನು ಒಳಗೊಂಡ ಒಂದು ಅದ್ಭುತ ಸಿನಿಮಾ. ‘ಸು ಫ್ರಂ ಸೋ’ ಚಿತ್ರದಲ್ಲಿ ಗಮನಸೆಳೆದ ಹಲವಾರು ಕಲಾವಿದರು ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದು, ಪ್ರಕಾಶ್ ತೂಮಿನಾಡು, ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವುದು ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಅದೇ ರೀತಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಾಯಕಿಯಾಗಿ ಮಿಂಚಿದ್ದು, ಕುಸೇಲ್ದರಸೆ ನವೀನ್ ಡಿ. ಪಡೀಲ್ ಮತ್ತು ಭರವಸೆಯ ಯುವ ನಟ ಅಥರ್ವ ಪ್ರಕಾಶ್ ಚಿತ್ರಕ್ಕೆ ಇನ್ನಷ್ಟು ಬಲ ತುಂಬಿದ್ದಾರೆ.

ಪ್ರೀತಿಯ ಹಿಂದೆ ಓಡುತ್ತಿರುವ ಮುಗ್ಧ ಯುವಕನ ಸುತ್ತ ಹೆಣೆದ ಕಥೆಯನ್ನು ಹಾಸ್ಯದ ಹೊದಿಕೆಯಲ್ಲಿ ಹೇಳುವ ಈ ಸಿನಿಮಾ, ಯುವ ಸಮುದಾಯವನ್ನು ಸೆಳೆಯುವ ಜೊತೆಗೆ ಕುಟುಂಬ ಸಮೇತ ಕುಳಿತು ನೋಡಬಹುದಾದ ಅಪರೂಪದ ತುಳು ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಹಾಸ್ಯ, ಮನೋರಂಜನೆ ಮತ್ತು ಸಂದೇಶ – ಮೂರು ಕೂಡಾ ಒಂದೇ ಪ್ಯಾಕೇಜ್‌ನಲ್ಲಿ ಸಿಗುವುದು ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್.

ಒಟ್ಟಿನಲ್ಲಿ, ‘ನಾನ್‌ವೆಜ್’ ಸಿನಿಮಾ ಕೇವಲ ತೆರೆಗೆ ಬರುವ ಚಿತ್ರವಲ್ಲ; ಇದು ತುಳು ಚಿತ್ರರಂಗದ ವ್ಯಾಪ್ತಿಯನ್ನು ಮಲ್ಟಿಪ್ಲೆಕ್ಸ್‌ಗಳವರೆಗೆ ವಿಸ್ತರಿಸಿದ ಐತಿಹಾಸಿಕ ಹೆಜ್ಜೆ. ಫೆಬ್ರವರಿ 6ರಂದು ಕರಾವಳಿ ಜಿಲ್ಲೆಗಳಾದ್ಯಂತ ಬಿಡುಗಡೆಯಾಗುತ್ತಿರುವ ಈ ಸಿನಿಮಾ, ತುಳು ಸಿನಿಮಾ ಇತಿಹಾಸದಲ್ಲಿ ‘99 ರೂಪಾಯಿ ಕ್ರಾಂತಿ’ಯಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.