ವ್ಯಾಪಾರ‌-ರಕ್ಷಣೆ- ಬಾಹ್ಯಾಕಾಶವರೆಗೆ ಒಪ್ಪಂದ: ಭಾರತ–ಯುಎಇ ಮೈತ್ರಿ ಗಟ್ಟಿಯಾಗುತ್ತಿದ್ದಂತೆ ಪಾಕಿಸ್ತಾನಕ್ಕೆ ಹೊಟ್ಟೆ ಉರಿ!

ನವದೆಹಲಿ: ಭಾರತ–ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತೊಂದು ಎತ್ತರಕ್ಕೆ ಏರುತ್ತಿದ್ದಂತೆಯೇ, ಈ ಬೆಳವಣಿಗೆ ಪಾಕಿಸ್ತಾನಕ್ಕೆ ಹೊಟ್ಟೆ ಉರಿ ತಂದಂತಾಗಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಕೇವಲ ಒಂದೂವರೆ ಗಂಟೆಗಳ ಅಧಿಕೃತ ಭಾರತ ಭೇಟಿ, ದಕ್ಷಿಣ ಏಷ್ಯಾದ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಭೇಟಿಯ ವೇಳೆ ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಟ್ಟು 12 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಭಾರತ–ಯುಎಇ ಸಂಬಂಧಗಳು ಈಗ ‘ವ್ಯೂಹಾತ್ಮಕ ಪಾಲುದಾರಿಕೆ’ಯಿಂದ ‘ಆರ್ಥಿಕ ಶಕ್ತಿಸಾಮರ್ಥ್ಯ ಮೈತ್ರಿ’ಯ ಹಂತಕ್ಕೆ ತಲುಪಿವೆ. ಈ ಬೆಳವಣಿಗೆಯನ್ನು ಪಾಕಿಸ್ತಾನ ಮೌನದಿಂದಲೇ ಗಮನಿಸುತ್ತಿರುವುದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷರನ್ನು ವಿಮಾನ ನಿಲ್ದಾಣದಲ್ಲೇ ಸ್ವತಃ ಸ್ವಾಗತಿಸಿದ್ದು, ಇದು ಉಭಯ ನಾಯಕರ ನಡುವಿನ ಅಪರೂಪದ ಆತ್ಮೀಯತೆಯನ್ನು ಪ್ರದರ್ಶಿಸಿತು. ಈ ದೃಶ್ಯಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪಾಕಿಸ್ತಾನದಲ್ಲಿ ರಾಜಕೀಯ ಹಾಗೂ ರಾಜತಾಂತ್ರಿಕ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ ಎನ್ನಲಾಗುತ್ತಿದೆ.

2022ರಲ್ಲಿ ಜಾರಿಗೆ ಬಂದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ನಂತರ ಭಾರತ–ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರ 100 ಬಿಲಿಯನ್ ಡಾಲರ್‌ ಗಡಿ ದಾಟಿದೆ. ಇದೀಗ 2032ರ ವೇಳೆಗೆ ಈ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಉಭಯ ನಾಯಕರು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಶ್ಚಿಮ ಏಷ್ಯಾ, ಆಫ್ರಿಕಾ ಹಾಗೂ ಯುರೇಷಿಯಾ ಮಾರುಕಟ್ಟೆಗಳಿಗೆ ಭಾರತೀಯ ಎಂಎಸ್‌ಎಂಇ ಉತ್ಪನ್ನಗಳಿಗೆ ದಾರಿ ತೆರೆಯಲಾಗಿದೆ. ಆರ್ಥಿಕ ಸಂಕಷ್ಟದಲ್ಲೇ ದಿನ ಕಳೆಯುತ್ತಿರುವ ಪಾಕಿಸ್ತಾನಕ್ಕೆ ಇದು ಸಹಜವಾಗಿಯೇ ಅಸಹನೀಯ ಸುದ್ದಿಯಾಗಿದೆ.

ರಕ್ಷಣಾ ಸಹಕಾರ, ಬಾಹ್ಯಾಕಾಶ ಯೋಜನೆಗಳು, ಪರಮಾಣು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೂಪರ್‌ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್ ಹೂಡಿಕೆಗಳವರೆಗೆ ವಿಸ್ತರಿಸಿರುವ ಈ ಒಪ್ಪಂದಗಳು, ಭಾರತವನ್ನು ಯುಎಇಯ ಪ್ರಮುಖ ಹಾಗೂ ವಿಶ್ವಾಸಾರ್ಹ ಪಾಲುದಾರನಾಗಿ ಮತ್ತಷ್ಟು ಬಲಪಡಿಸಿವೆ. ಇದರ ಪರಿಣಾಮವಾಗಿ ಪಾಕಿಸ್ತಾನ ಈ ಪ್ರದೇಶದಲ್ಲಿ ಕ್ರಮೇಣ ರಾಜತಾಂತ್ರಿಕವಾಗಿ ಒಂಟಿಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

ವಿಶೇಷವಾಗಿ ಗುಜರಾತ್‌ನ ಧೋಲೇರಾದಲ್ಲಿ ಅತಿದೊಡ್ಡ ಹೂಡಿಕೆ ಯೋಜನೆಗೆ ಯುಎಇ ಕೈಜೋಡಿಸಿರುವುದು, ಭಾರತವನ್ನು ಜಾಗತಿಕ ಹೂಡಿಕೆ ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗ್ರೀನ್‌ಫೀಲ್ಡ್ ಬಂದರು, ಎಂಆರ್‌ಒ ಕೇಂದ್ರ ಮತ್ತು ಸ್ಮಾರ್ಟ್ ಟೌನ್‌ಶಿಪ್ ಯೋಜನೆಗಳು ಭಾರತಕ್ಕೆ ಭವಿಷ್ಯದ ಆರ್ಥಿಕ ಬಲ ನೀಡಲಿವೆ. ಈ ಬೆಳವಣಿಗೆಗಳು ಪಾಕಿಸ್ತಾನದ ಆರ್ಥಿಕ ದುರ್ಬಲತೆಯನ್ನು ಇನ್ನಷ್ಟು ಬಯಲು ಮಾಡಿವೆ.

ಒಟ್ಟಿನಲ್ಲಿ, ಭಾರತ ತನ್ನ ರಾಜತಾಂತ್ರಿಕ ಹಾಗೂ ಆರ್ಥಿಕ ವಿಸ್ತರಣೆಯೊಂದಿಗೆ ವಿಶ್ವದ ಪ್ರಮುಖ ರಾಷ್ಟ್ರಗಳ ವಿಶ್ವಾಸ ಗಳಿಸುತ್ತಿರುವಾಗ, ಪಾಕಿಸ್ತಾನ ಮಾತ್ರ ಪಕ್ಕದಲ್ಲಿ ನಿಂತು ಈ ಬೆಳವಣಿಗೆಗಳನ್ನು ನೋಡುತ್ತಾ ‘ಹೊಟ್ಟೆ ಉರಿ’ ಪಡುತ್ತಿರುವ ಸ್ಥಿತಿಗೆ ತಲುಪಿರುವುದು ಈ ಭೇಟಿಯ ಮೌನ ಸಂದೇಶವಾಗಿದೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.

error: Content is protected !!