ನೆರೆಮನೆ ದಂಪತಿಯನ್ನು ಅಟ್ಟಾಡಿಸಿ ಕೊಲೆ: ಮೂಲ್ಕಿ ನಿವಾಸಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಐದು ವರ್ಷಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಸಿ ನೆರೆಮನೆಯ ದಂಪತಿಯನ್ನು ಅಟ್ಟಾಡಿಸಿ ಕೊಲೆಗೈದ ಮುಲ್ಕಿ ನಿವಾಸಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ನಿವಾಸಿ ಅಲ್ಫೋನ್ಸ್ ಸಲ್ದಾನ (65) ಶಿಕ್ಷೆಗೊಳಗಾದವನು.

2020ರ ಏಪ್ರಿಲ್ 29ರಂದು ಆರೋಪಿ ಅಲ್ಫೋನ್ಸ್ ಸಲ್ದಾನ ತನ್ನ ನೆರೆಮನೆಯವನಾದ ವಿನ್ಸಿ ಅಲಿಯಾಸ್ ವಿನ್ಸೆಂಟ್ ಡಿʼಸೋಜಾ ಅವರೊಂದಿಗೆ ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿ ಜಗಳ ನಡೆಸಿದ್ದ. ನಂತರ ರಾಜಿ ಪಂಚಾಯಿತಿ ಮಾಡುವ ನೆಪದಲ್ಲಿ ವಿನ್ಸೆಂಟ್ ಡಿʼಸೋಜಾ ಅವರನ್ನು ತನ್ನ ಮನೆಗೆ ಕರೆಸಿ ಗಲಾಟೆ ನಡೆಸಿ ಚೂರಿಯಿಂದ ತಿವಿದಿದ್ದ.

ಈ ವೇಳೆ ಪತಿಯನ್ನು ರಕ್ಷಿಸಲು ಧಾವಿಸಿ ಬಂದ ವಿನ್ಸೆಂಟ್ ಡಿʼಸೋಜಾ ಅವರ ಪತ್ನಿ ಹೆಲೆನ್ ಡಿʼಸೋಜಾ ಅಲಿಯಾಸ್ ಹೆಲೆನ್ ರೋಸಿ ರೋಡ್ರಿಗಸ್‌ ಗೂ ಚೂರಿಯಿಂದ ತಿವಿದಿದ್ದ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು.

ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2020 ಅಡಿಯಲ್ಲಿ ಐಪಿಸಿ ಕಲಂ 341, 504, 506 ಹಾಗೂ 302 ರಂತೆ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಯರಾಮ ಡಿ. ಗೌಡ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ತನಿಖೆಯಲ್ಲಿ ಎಎಸ್ಐ ಉಮೇಶ್ ಕೆ. ಹಾಗೂ ಹೆಡ್‌ ಕಾನ್ಸ್‌ಟೇಬಲ್ ವಾದಿರಾಜ ಅವರು ಸಹಕರಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಮೊದಲಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ನಡೆಸಿದ್ದು, ಅಂತಿಮವಾಗಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಜ.19ರಂದು ಅಲ್ಫೋನ್ಸ್ ಸಲ್ದಾನನಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಜೊತೆಗೆ 2 ಲಕ್ಷ ರೂ. ದಂಡವೂ ವಿಧಿಸಿದ್ದಾರೆ.

ಸಾಕ್ಷ್ಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಅವರು ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದರು.

error: Content is protected !!