
ಗ್ರಹಣದಲ್ಲಿ ಖಗ್ರಾಸ ಗ್ರಹಣ, ಖಂಡಗ್ರಾಸ ಗ್ರಹಣ, ವಲಯ ಗ್ರಹಣ ಎಂದು ಪ್ರಧಾನ ಭೇದಗಳಿವೆ. ಹಾಗೆಯೇ ಅವುಗಳಲ್ಲಿ ಗ್ರಸ್ತೋದಯ ಗ್ರಹಣ, ಗ್ರಸ್ತಾಸ್ತ ಗ್ರಹಣಗಳೂ ಸಂಭವಿಸುತ್ತವೆ. ಗ್ರಸ್ತೋದಿತ ಗ್ರಹಣ ಎಂದರೆ ನಮ್ಮ ಪ್ರದೇಶದಲ್ಲಿ ಚಂದ್ರ ಉದಯವಾಗುವ ಮೊದಲೇ ಚಂದ್ರನಿಗೆ ಗ್ರಹಣ ಆರಂಭವಾಗಿದ್ದು ಗ್ರಹಣ ಹಿಡಿದಿರುವ ಚಂದ್ರನು ಪೂರ್ವಕ್ಷಿತಿಜದಲ್ಲಿ ಉದಯಿಸುವುದು ಎಂದರ್ಥವಾಗಿದೆ.

ಪ್ರಸ್ತುತ ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ದಿನವಾದ ಇಂದು ಈ ಗ್ರಸ್ತೋದಿತ ಚಂದ್ರಗ್ರಹಣವು ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಗೋಚರವಾಗುತ್ತದೆ. ಕರ್ನಾಟಕದಲ್ಲಿ ಸಾಯಂಕಾಲ 6:28 ರಿಂದ 6:48 ರವರೆಗೆ ಭಾಗಶಃ ಗ್ರಹಣವು ಗೋಚರವಾಗುತ್ತದೆ. ಗ್ರಹಣವು ಕೇವಲ 9 ರಿಂದ 20 ನಿಮಿಷಗಳು ಮಾತ್ರ ಗೋಚರಿಸಿದರೂ, ಅದರ ಪ್ರಭಾವವು ಸಿಂಹ ರಾಶಿಯ ಮೇಲೆ ನಿರ್ದಿಷ್ಟವಾಗಿ ಪ್ರಭಾವ ಬೀರಲಿದ್ದು, ಇನ್ನುಳಿದ ಎಲ್ಲ 11 ರಾಶಿಗಳು ಹಾಗೂ 27 ನಕ್ಷತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಈ ದೋಷಗಳನ್ನು ನಿವಾರಿಸಲು ಬುಧವಾರ ಬೆಳಿಗ್ಗೆ ಈಶ್ವರನ ದೇವಾಲಯಕ್ಕೆ ಹೋಗಿ ಅಕ್ಕಿ, ಉದ್ದು ಮತ್ತು ಎಣ್ಣೆಯನ್ನು ಅರ್ಪಿಸುವುದು ಉತ್ತಮವಾಗಿದೆ.