ಮಂಗಳೂರು: ಉದ್ಯೋಗಕ್ಕಾಗಿ ಒಮನ್ ದೇಶಕ್ಕೆ ತೆರಳಿದ್ದ ಮಂಗಳೂರು ಮೂಲದ ಯುವಕನೋರ್ವ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರಿನ ಸೋಮೇಶ್ವರ ನಿವಾಸಿ, 32 ವರ್ಷದ ಪುನೀತ್ ಪೂಜಾರಿ ಮೃತಪಟ್ಟ ದುರ್ದೈವಿ. ಪ್ರೇಯಸಿ ಫೋನ್ ಸ್ವೀಕರಿಸದೆ, ಮೆಸೇಜ್‌ಗಳಿಗೆ ಉತ್ತರಿಸದ ಹತಾಶೆಯ ನೋವಿನಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಒಮನ್‌ನಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮರಳಿದ್ದರು.
ವರದಿಗಳ ಪ್ರಕಾರ, ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆ ಯುವತಿಯು ಪುನೀತ್ ಅವರ ಫೋನ್ ಕರೆಗಳಿಗೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಪುನೀತ್, ವಿದೇಶದಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಯುವತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದ ಪುನೀತ್, ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸೋಮೇಶ್ವರದಲ್ಲಿರುವ ಅವರ ಪೋಷಕರು ಮತ್ತು ಸಂಬಂಧಿಕರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಸದ್ಯ ಮೃತದೇಹವನ್ನು ತಾಯ್ನಾಡಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.