ಸುರತ್ಕಲ್ ಬಂಟರ ವಾರ್ಷಿಕ ಕ್ರೀಡಾಕೂಟ
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಬಂಟರ ಕ್ರೀಡೋತ್ಸವ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.


ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ , ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಡಾ ಪಿ.ವಿ.ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು “ಸುರತ್ಕಲ್ ಬಂಟರ ಸಂಘ ನನ್ನ ಮನೆಯಿದ್ದಂತೆ. ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದೇನೆ. ಇದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಕ್ರೀಡೆಯಷ್ಟೇ ಶಿಕ್ಷಣವೂ ಮುಖ್ಯ. ಮಕ್ಕಳು ಕ್ರೀಡೆಗೆ ಮಾತ್ರ ಮಹತ್ವ ಕೊಟ್ಟರೆ ಸಾಲದು. ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲು ಅನಾನುಕೂಲಗಳಿದ್ದರೆ ನನ್ನನ್ನು ಸಂಪರ್ಕಿಸಿ. ನಿಮ್ಮ ಜೊತೆಗೆ ನಾನಿದ್ದೇನೆ” ಎಂದರು.
ಬಳಿಕ ಮಾತಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ। ಎಂ ಮೋಹನ್ ಆಳ್ವ ಅವರು, “ಸುರತ್ಕಲ್ ಬಂಟರ ಸಂಘ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂದು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಧನಲಕ್ಷ್ಮೀ ಪೂಜಾರಿಯವರನ್ನು ಸನ್ಮಾನಿಸಿದ್ದೀರಿ. ಇದು ನಿಜಕ್ಕೂ ಖುಷಿಯ ವಿಚಾರ. ಧನಲಕ್ಷ್ಮೀ 11 ವರ್ಷಗಳ ಕಾಲ ನಮ್ಮ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇದ್ದ ಹೆಮ್ಮೆಯ ಕ್ರೀಡಾಪಟು. ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಪ್ರತಿಭೆಗಳನ್ನು ಕ್ರೀಡಾಳುಗಳನ್ನು ಬೆಳೆಸಲು ಸಂಘಟನೆಯ ಸಹಕಾರ ಅಗತ್ಯ” ಎಂದರು.

ಇನ್ನೋರ್ವ ಮುಖ್ಯ ಅತಿಥಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ ಸುರತ್ಕಲ್ ಬಂಟರ ಸಂಘ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಕ್ರೀಯಾಶೀಲ ಸಂಘಟನೆಯಾಗಿ ಬೆಳೆದಿದೆ. ಸಂಘದ ಒಗ್ಗಟ್ಟು, ಕಾರ್ಯ ಸಾಧನೆ ಇತರ ಸಂಘಗಳಿಗೆ ಮಾದರಿ ಎಂದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತಾಡಿ, “ಕ್ರೀಡಾಕೂಟ ತುಂಬಾ ಚೆನ್ನಾಗಿ ನಡೆದಿದೆ. ಇಂತಹ ಕಾರ್ಯಕ್ರಮ ಆಯೋಜನೆಗೆ ನಿಮ್ಮೆಲ್ಲರ ಸಹಕಾರ ಬೇಕು” ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿಬಂಟರ ಸಂಘ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷ ರೋಹಿತಾಕ್ಷ ರೈ ಕುಳಾಯಿಗುತ್ತು, ಮಾಜಿ ಅಧ್ಯಕ್ಷರಾದ ದೇವಾನಂದ ಎಂ.ಶೆಟ್ಟಿ, ಉಲ್ಲಾಸ್ ಆರ್. ಶೆಟ್ಟಿ, ಸುಧಾಕರ್ ಎಸ್. ಪೂಂಜಾ, ನಿಕಟಪೂರ್ವ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪ್ರವೀಣ್ ಪಿ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜ ಟಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಜೊತೆ ಕಾರ್ಯದರ್ಶಿ ಮೀರಾವಾಣಿ ಎಂ ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಕಾರ್ಯದರ್ಶಿ ಬಬಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಪೂಜಾರಿ ಹೆತ್ತವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಅನೂಪ್ ಶೆಟ್ಟಿ ದೇವರನ್ನು ಸ್ತುತಿಸಿದರು. ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮದ್ಯ ಧನ್ಯವಾದ ಸಮರ್ಪಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.