ತುಳು ಯಕ್ಷಗಾನ ಪ್ರಸಂಗ: ಬಂಗಾಡಿಯವರು ಅಗ್ರಗಣ್ಯರು; ಕೊಳ್ತಿಗೆ ನಾರಾಯಣ ಗೌಡ

ಮಂಗಳೂರು: ತನ್ನ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿ ಆ ಮೂಲಕ ಅಪಾರ ತುಳು ಪ್ರೇಕ್ಷಕ ವರ್ಗದ ಸೃಷ್ಟಿಗೆ ಕಾರಣವಾದವರು ಅನಂತರಾಮ ಬಂಗಾಡಿಯವರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷ ಪ್ರತಿಭೆ ಮಂಗಳೂರು ಸಹಯೋಗದಲ್ಲಿ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಲಾದ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕನ್ನಡದಲ್ಲಷ್ಟೇ ಯಕ್ಷಗಾನ ನಡೆಯುತ್ತಿದ್ದ ಕಾಲದಲ್ಲಿ ಜನರು ತುಳು ಯಕ್ಷಗಾನ ನೋಡುವಂತೆ ಮಾಡಿದ್ದು ಮಾತ್ರವಲ್ಲದೆ ತುಳು ಯಕ್ಷಗಾನದ ಮೂಲಕ ಯಕ್ಷಗಾನ ಮೇಳಗಳಿಗೆ ಆದಾಯ ತಂದುಕೊಡಲು ಸಾಧ್ಯ ಅನ್ನುವುದನ್ನು ಸಾಬೀತು ಪಡಿಸಿದ ಅನಂತರಾಮ ಬಂಗಾಡಿಯರು ತುಳು ಯಕ್ಷಗಾನಕ್ಕೆ ಕೊಡುಗೆ ನೀಡಿದ ಅಗ್ರಗಣ್ಯರು ಎಂದು ನಾರಾಯಣ ಗೌಡರು ಅಭಿಪ್ರಾಯಪಟ್ಟರು.

ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ತುಳು ಯಕ್ಷಗಾನದ ಕೊಡುಗೆ ಅಪಾರವಾದದ್ದು, 65 ತುಳು ಯಕ್ಷಗಾನ ಪ್ರಸಂಗವನ್ನು ರಚಿಸಿದ ಬಂಗಾಡಿಯವರು ಈ ನಿಟ್ಟಿನಲ್ಲಿ ಸದಾ ಸ್ಮರಣೀಯರು ಎಂದು ಹೇಳಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಪ್ರಭಾಕರ ನೀರುಮಾರ್ಗ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ, ಅನಂತರಾಮ ಬಂಗಾಡಿಯವರ ಅಳಿಯ ಕೇಶವ ಹೀರೆಬೆಟ್ಟು ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ಬೂಬ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಜಯ್ ಕುಮಾರ್ ಗೋಣಿಬೀಡು ಅವರ ನೇತೃತ್ವದ ಯಕ್ಷ ಪ್ರತಿಭೆ ತಂಡದಿಂದ ಸಿರಿ ಕೃಷ್ಣೆ -ಚಂದ್ರಪಾಲಿ ತುಳು ಯಕ್ಷಗಾನ ನಡೆಯಿತು.

error: Content is protected !!