ಮಂಗಳೂರು: ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವವನ್ನು ಜನವರಿ 11ರಂದು ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭವ್ಯವಾಗಿ ಆಚರಿಸಲಾಗುತ್ತದೆ. ಸಹಸ್ರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿ ಕಾಶೀಮಠದ 20ನೇ ಪೀಠಾಧೀಪತಿಗಳಾಗಿ 70 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಸಮಾಜದ ಮನೆಮನೆಗಳಲ್ಲಿ ಭಜನೆಯ ಮೂಲಕ ಭಕ್ತಿಮಾರ್ಗವನ್ನು ಪ್ರಸಾರ ಮಾಡಿದ್ದಾರೆ. ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಭಾರತ ಸೇರಿದಂತೆ ವಿದೇಶಗಳಲ್ಲಿ ಸುಮಾರು 10 ಸಾವಿರ ಘರ್ ಘರ್ ಭಜನೆ, ಗುರುಗುಣಗಾನ, ವ್ಯಾಸೋಪಾಸನೆ ಹಾಗೂ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮಗಳು ನಡೆದಿವೆ. ಪರಿಸರ ಕಾಳಜಿಯ ಸಂಕೇತವಾಗಿ ಶ್ರೀಗಳ ಸ್ಮರಣಾರ್ಥವಾಗಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿದ್ವಾರದಲ್ಲಿ ಒಟ್ಟು ಸುಮಾರು 65 ಸಾವಿರ ಫಲ ನೀಡುವ ಗಿಡಗಳನ್ನು ವಿತರಿಸಿ ನೆಡಲಾಗಿದೆ ಎಂದರು.

ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಬದ್ರಿಯಿಂದ ರಾಮೇಶ್ವರ–ತಿರುವನಂತಪುರದವರೆಗೆ ಸಂಚರಿಸಿ ಇದೀಗ ಮಂಗಳೂರಿಗೆ ಆಗಮಿಸಿದೆ. ಜನವರಿ 11ರಂದು ಮಧ್ಯಾಹ್ನ 3.30ಕ್ಕೆ ಕೊಂಚಾಡಿ ಕಾಶೀಮಠದಿಂದ ಭಜನಾ–ಸಂಕೀರ್ತನಾ ಪಾದಯಾತ್ರೆ ಆರಂಭವಾಗಿ ನಗರದ ಪ್ರಮುಖ ಮಾರ್ಗಗಳ ಮೂಲಕ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ರಾತ್ರಿ 8.30ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಚನ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಶಾಸಕ ವೇದವ್ಯಾಸ ಕಾಮತ್ ಪಾರ್ಕಿಂಗ್ ವಿವರ ನೀಡುತ್ತಾ, ಕೊಂಚಾಡಿಯಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು ಕೊಂಚಾಡಿ ಕಾಶೀಮಠದ ಬಳಿಯಿರುವ ಕೆನರಾ ವಿಕಾಸ್ ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಕೊಂಚಾಡಿ ಕಾಶೀಮಠದ ಬಳಿ ಜನರನ್ನು ಇಳಿಸಿ, ಹಂಪನಕಟ್ಟೆಯ ಬಳಿಯಿಂದ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯ ಮೂಲಕ ಎಲೋಶಿಯಸ್ ಕಾಲೇಜಿನ ಗೇಟ್ ನಂಬರ್ 1 ಒಳಗೆ ಹಾಗೂ ಗೇಟ್ ಸಿ ಒಳಗೆ ಪಾರ್ಕ್ ಮಾಡಬಹುದು.

ಕಾರುಗಳನ್ನು ಕೊಡಿಯಾಲ್ ಬೈಲ್ ಎಸ್ ಡಿಸಿಸಿ ಬ್ಯಾಂಕಿನ ಪಕ್ಕದಲ್ಲಿರುವ ಎಲೋಶಿಯಸ್ ಕಾಲೇಜಿನ ಗೇಟ್ ಮೂಲಕ ಹೋಗಿ ಲೊಯಲಾ ಸಭಾಂಗಣದ ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದು. ಇನ್ನು ಕೊಡಿಯಾಲ್ ಬೈಲ್ ನಲ್ಲಿರುವ ಬೆಸೆಂಟ್ ಕಾಲೇಜಿನಲ್ಲಿಯೂ ಪಾರ್ಕಿಂಗ್ ಮಾಡಬಹುದು. ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ರಾತ್ರಿ 10 ಗಂಟೆಯ ಬಳಿಕ ಸಿಟಿಪಾಯಿಂಟ್, ಪಾಸ್ ಪೋರ್ಟ್ ಆಫೀಸಿನ ಬಳಿ ತಂದು ನಿಲ್ಲಿಸಬೇಕು. ಎಲೋಶಿಯಸ್, ಬೆಸೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳು ಅಲ್ಲಿಯೇ ಇದ್ದು ಭಕ್ತಾದಿಗಳು ಅಲ್ಲಿಗೆ ತೆರಳಿ ತಾವು ಆಗಮಿಸಿದ ವಾಹನಗಳ ಮೂಲಕ ತೆರಳುವಂತೆ ಶಾಸಕರು ಮನವಿ ಮಾಡಿದರು.

ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆ:
ಊರ, ಪರವೂರ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ರಾತ್ರಿ 8.30 ರ ಬಳಿಕ ಮಹಾಮಾಯಾ ದೇವಸ್ಥಾನದ ಬಳಿ, ಉಮಾಮಹೇಶ್ವರ ದೇವಸ್ಥಾನದ ಬಳಿ, ಭವಂತಿ ಸ್ಟ್ರೀಟ್ ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್ ಕೇರ್ ಸೆಂಟರ್ ಜಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಮೊಕ್ತೇಸರ ಸಿಎ ಜಗನ್ನಾಥ್ ಕಾಮತ್, ಪ್ರಮುಖರಾದ ಕೋಟೇಶ್ವರ ದಿನೇಶ್ ಕಾಮತ್, ವಾಸುದೇವ್ ಕಾಮತ್, ರಘುವೀರ್ ಭಂಡಾರಕಾರ್, ಟಿ. ಗಣಪತಿ ಪೈ, ಪ್ರಶಾಂತ್ ಪೈ ಉಪಸ್ಥಿತರಿದ್ದರು.