ಬಂಟ್ವಾಳ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋವನ್ನು ಬಳಸಿಕೊಂಡು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿ ಸುಳ್ಳು ಅಪಪ್ರಚಾರ ನಡೆಸಲಾಗಿದೆ ಎಂಬ ಆರೋಪದಡಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದೇಶ ಯಾನೆ ಸೀತಾರಾಮ ಬಂಟ್ವಾಳ ಎಂಬಾತನ ವಿರುದ್ಧ ದೂರು ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 03/2026, ಕಲಂ: 352, ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.7ರಂದು ಸದಾನಂದ ಬಂಟ್ವಾಳ ಎಂಬವರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಖಾತೆ ವೀಕ್ಷಿಸುವ ವೇಳೆ, ‘ಬಿಲ್ಲವ ಸಂದೇಶ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಫೋಟೋ ಬಳಸಿ ಅವಹೇಳನಕಾರಿ ಬರಹ ಹಾಗೂ ಸುಳ್ಳು ಅಪಪ್ರಚಾರ ಮಾಡಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.