ಸುರತ್ಕಲ್: ತಮ್ಮ ಮೇಲೆ ದಿನಕ್ಕೊಂದು ರೀತಿಯ ನೆಪಯೊಡ್ಡಿ ಕಿರುಕುಳ ನೀಡುತ್ತಿರುವುದಲ್ಲದೆ, ಗೇಟ್ ಮುಂದೆ ವಿನಾಕಾರಣ ನಿಲ್ಲಿಸಿ ಸತಾಯಿಸಲಾಗುತ್ತಿದೆ ಆರೋಪಿಸಿ 400ಕ್ಕೂ ಅಧಿಕ ಮಂದಿ ಸ್ಥಳೀಯ ಕೂಲಿ ಕಾರ್ಮಿಕರು ಎಂಆರ್‌ಪಿಎಲ್ ಗೇಟ್ ಮುಂದೆ ದೀಢೀರ್ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಎಂಆರ್‌ಪಿಎಲ್‌ನಲ್ಲಿ ನಿಗದಿತ ಗೇಟಿಗೆ ಮಾತ್ರ ಪಾಸ್ ನೀಡಲು ಮುಂದಾಗಿದ್ದು ಇದರಿಂದ ಬಡಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರ್ಮಿಕರು ಎಂದಿನಂತೆ ತಮ್ಮ ಮನೆಯಿಂದ ಅನುಕೂಲಕರ ಗೇಟಿನಿಂದ ಕರ್ತವ್ಯಕ್ಕೆ ಹೋಗಲು ಬಂದಾಗ ಭದ್ರತಾ ಸಿಬ್ಬಂದಿ ಕಾರ್ಮಿಕರನ್ನು ತಡೆದು ನಿಲ್ಲಿಸುತ್ತಿದ್ದಾರೆ. ಇದರಿಂದ ಬಡಕಾರ್ಮಿಕರು ಅಯಾ ಅಯಾ ಗೇಟ್ ಮುಂಭಾಗದಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಎಂಆರ್‌ಪಿಎಲ್ ಸಂಸ್ಥೆಯು ನೇರ ಉದ್ಯೋಗವನ್ನು ಸ್ಥಳೀಯರಿಗೆ ನೀಡುತ್ತಿಲ್ಲ. ಕಂಪೆನಿಯಿಂದ ಹೊರಸೂಸುವ ವಿಷಗಾಳಿಗೆ ತುತ್ತಾದ ಸ್ಥಳೀಯರಿಗೆ ನೇರ ಉದ್ಯೋಗ ಇಲ್ಲ. ಬದಲಿಗೆ ಇವರು ಕನಿಷ್ಠ ಪಕ್ಷ ದಿನಕೂಲಿ ನೌಕರರಾಗಿ ಅನೇಕ ಜನ ಸ್ಥಳೀಯರು ಉದ್ಯೋಗದಲ್ಲಿದ್ದಾರೆ. ಈಗ ಅವರನ್ನು ಎಂಆರ್‌ಪಿಎಲ್ ಸಂಸ್ಥೆ ಹೊರದಬ್ಬುವ ಕೆಲಸ ಮಾಡುತ್ತಿದೆ. ಆ ಮೂಲಕ ಹೊರರಾಜ್ಯದವರನ್ನು ಕಡಿಮೆ ವೇತನಕ್ಕೆ ದುಡಿಸಿ, ಸಂಸ್ಥೆಗೆ ಲಾಭ ತರುವಂತೆ ಮಾಡಿಸಿ ಸ್ಥಳೀಯರನ್ನು ಕಂಪೆನಿಯಿಂದ ಹೊರಹಾಕುವ ಕೆಲಸ ಮಾಡಲಾಗುತ್ತಿದೆ.

ಸ್ಥಳೀಯ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಹಾಗೂ ಪ್ರಸ್ತುತ ಉದ್ಯೋಗದಲ್ಲಿದ್ದ ಕೂಲಿ ಕಾರ್ಮಿಕರು ನಿವೃತ್ತಿ ಹೊಂದಿದರೆ ಅದಕ್ಕೆ ಹೊಸ ಕಾರ್ಮಿಕರನ್ನು ನೇಮಿಸುತ್ತಿಲ್ಲ. ಕರ್ತವ್ಯದಲ್ಲಿರುವವರನ್ನೇ ಹೀನಾಯವಾಗಿ ದಂಡಿಸಿ ದುಡಿಸುವ ಮೂಲಕ ಎಂಆರ್‌ಪಿಎಲ್ ಸಂಸ್ಥೆಯ ಕೆಲವು ಉನ್ನತ ಮಟ್ಟದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತು.

ಬೇಡಿಕೆಗಳು:
ಎಂಆರ್‌ಪಿಎಲ್ ಸಂಸ್ಥೆಯು ಎಲ್ಲಾ ಗೇಟ್ ಗಳಲ್ಲಿ ಕಾರ್ಮಿಕರು ಒಳಗೆ ಹೋಗಲು ಎಚ್ ಅರ್ ವಿಭಾಗ ಅನುಮತಿ ನೀಡಬೇಕು. ಅಕ್ಟೋಬರ್ ತಿಂಗಳಲ್ಲಿ ಸಂಸ್ಥೆಯು ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡಲಿಲ್ಲ. ಅದನ್ನು ಶೀಘ್ರವಾಗಿ ಹೆಚ್ಚಳ ಮಾಡಬೇಕು. ಯಾವುದೇ ಕಾರಣಕ್ಕೂ ಕೂಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಬಾರದು. ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದ್ದು, ಅದನ್ನು ಕೂಡಲೇ ಭರ್ತಿಗೊಳಿಸಬೇಕು. ಎಂಆರ್‌ಪಿಎಲ್ ಸಂಸ್ಥೆಯು ಕೂಲಿ ಕಾರ್ಮಿಕರಿಗೆ ಬಹಳ ಕಠಿಣ ನಿಯಮಗಳನ್ನು ಮಾಡುತ್ತಿದ್ದು, ಅದನ್ನು ಕೂಡಲೇ ಕೈ ಬಿಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಕಾರ್ಮಿಕರು ಎಂಆರ್‌ಪಿಎಲ್ ಸಂಸ್ಥೆಯ ಮುಂದಿಟ್ಟಿದ್ದಾರೆ.
