ಮಂಗಳೂರು: ಮಂಗಳೂರು ಗಾಲ್ಫ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಪಿಲಿಕುಲ ಗಾಲ್ಫ್ ಕ್ಲಬ್ ಸಜ್ಜಾಗಿದೆ. ಇದೇ ಜನವರಿ 31ರಂದು ಪಿಲಿಕುಲ ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿರುವ ಭಾರತದ ಮೊದಲ-ಎವೆರ್ ಫ್ಲಡ್‌ಲೈಟ್ ಪ್ರೋ–ಆಮ್ ಗಾಲ್ಫ್ ಟೂರ್ನಮೆಂಟ್‌ಗೆ 18 ಹೋಲ್‌ಗಳೊಂದಿಗೆ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಆಗಿ ಪರಿತರ್ವನೆಗೊಂಡಿರುವ ಪಿಲಿಕುಳದ ಗಾಲ್ಫ್ ಕ್ಲಬ್ ಆತಿಥ್ಯ ವಹಿಸುತ್ತಿದೆ ಎಂದು ಪಿಲಿಕುಳ ಗಾಲ್ಫ್ ಕ್ಲಬ್ ಕ್ಯಾಪ್ಟನ್ ಮನೋಜ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ ಅವರು, ಸಂಪೂರ್ಣವಾಗಿ ಪ್ಲಡ್ ಲೈಟಿಂಗ್ ವ್ಯವಸ್ಥೆಯೊಂದಿಗೆ ನಡೆಯುವ ಗಾಲ್ಫ್ ಪಂದ್ಯಾವಳಿ ಪಿಲಿಕುಲವನ್ನು ರಾಷ್ಟ್ರಮಟ್ಟದ ಗಾಲ್ಫ್ ನಕ್ಷೆಯಲ್ಲಿ ಗುರುತಿಸುವ ಮಹತ್ವದ ಹೆಜ್ಜೆಯಾಗಲಿದೆ. ಈ ಟೂರ್ನಮೆಂಟ್‌ನಲ್ಲಿ ವೃತ್ತಿಪರ ಹಾಗೂ ಉದಯೋನ್ಮುಖ ಗಾಲ್ಫ್ ಆಟಗಾರರು ಒಂದೇ ವೇದಿಕೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.

ಅತ್ಯಾಧುನಿಕ ಬೆಳಕು ವ್ಯವಸ್ಥೆ, ಅಂತರರಾಷ್ಟ್ರೀಯ ಗುಣಮಟ್ಟದ ಹಸಿರು ಮೈದಾನ (ಟರ್ಫ್) ಹಾಗೂ ಆಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ಪಿಲಿಕುಲ ಗಾಲ್ಫ್ ಕ್ಲಬ್ ಮೆರುಗು ನೀಡಲಿದೆ. ದೇಶದ ಪ್ರಮುಖ 12 ಮಂದಿ ವೃತ್ತಿಪರ ಗಾಲ್ಫ್ ಆಟಗಾರರು ಈಗಾಗಲೇ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ. ಅಗ್ರಶ್ರೇಣಿಯ ಆಟಗಾರರೊಂದಿಗೆ ಸ್ಥಳೀಯ ಹವ್ಯಾಸಿ ಗಾಲ್ಫ್ ಆಟಗಾರರು ಒಂದೇ ಮೈದಾನದಲ್ಲಿ ಆಡುವ ಅಪೂರ್ವ ಅವಕಾಶ ಪಡೆದಿದ್ದಾರೆ. ಇದರಿಂದಾಗಿ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಉನ್ನತ ಮಟ್ಟದಲ್ಲಿ ಪ್ರದರ್ಶಿಸಲು ಸೂಕ್ತ ವೇದಿಕೆ ಸಿಗಲಿದೆ ಎಂದು ಮನೋಜ್ ಶೆಟ್ಟಿ ತಿಳಿಸಿದರು.

ಪಿಲಿಕುಳದ ನವೀಕೃತ ಗಾಲ್ಫ್ ಕೋರ್ಸ್ ಉದ್ಘಾಟನೆಯನ್ನು ಜನವರಿ 9ರಂದು ನಡೆಸಲು ಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜನವರಿ 10ರಂದು ಮಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ, ಅವರಿಂದಲೇ ಉದ್ಘಾಟನೆ ನಡೆಸಲು ಪ್ರಯತ್ನಗಳು ನಡೆಯುತ್ತಿವೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಗಾಲ್ಫ್ ಕ್ರೀಡೆಗೆ ಯುವಕರನ್ನು ಆಕರ್ಷಿಸುವ ಉದ್ದೇಶದಿಂದ ಪಿಲಿಕುಳದಲ್ಲಿ ವಿಶ್ವದರ್ಜೆಯ ಗಾಲ್ಫ್ ಅಕಾಡೆಮಿ ಸ್ಥಾಪನೆ ಸಿದ್ಧತೆ ನಡೆಯುತ್ತಿದ್ದು, ಮೈಕಲ್ ಡಿಸೋಜಾರ ಪ್ರಾಯೋಜಕತ್ವದಲ್ಲಿ ಮೂರು ತಿಂಗಳೊಳಗೆ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಮನೋಜ್ ಶೆಟ್ಟಿ ಹೇಳಿದರು.

ಪಿಲಿಕುಲ ಗಾಲ್ಫ್ ಕ್ಲಬ್: ವಿಶ್ವಮಟ್ಟದ ಸಾಧನೆ
1999ರಲ್ಲಿ ಸ್ಥಾಪಿತವಾದ ಪಿಲಿಕುಲ ಗಾಲ್ಫ್ ಕ್ಲಬ್ ಅನ್ನು 2025ರಲ್ಲಿ 9 ಹೋಲ್‌ನಿಂದ 18 ಹೋಲ್ ವಿಶ್ವಮಟ್ಟದ ಗಾಲ್ಫ್ ಕೋರ್ಸ್ ಆಗಿ ವಿಸ್ತರಿಸಲಾಗಿದೆ. ಸಂಪೂರ್ಣ ಫ್ಲಡ್‌ಲಿಟ್ ವ್ಯವಸ್ಥೆ ಹೊಂದಿರುವ ಈ ಕೋರ್ಸ್ ದೇಶದಲ್ಲಿ ಮೂರನೇ ಹಾಗೂ ದೆಹಲಿ ಎನ್‌ಸಿಆರ್ ಹೊರಗೆ ಮೊದಲನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. A+ ವರ್ಗದ ಮಾನ್ಯತೆ ಪಡೆದಿರುವ ಕ್ಲಬ್‌ನಲ್ಲಿ “ಟೊರೊ” ಸ್ವಯಂಚಾಲಿತ ನೀರಾವರಿ ವ್ಯವಸ್ಥೆ, 4.2 ಕಿ.ಮೀ. ಕಾರ್ಟ್ ಪಥ, 10 ವಿದ್ಯುತ್ ಬಗ್ಗಿಗಳು, ಸುಸಜ್ಜಿತ ಕೊಠಡಿಗಳು ಹಾಗೂ 20,000 ಚದರ ಅಡಿ ಹಸಿರು ಹೊರಾಂಗಣ ಸ್ಥಳವಿದೆ. ಈ ಕೋರ್ಸ್ ಪ್ರವಾಸೋದ್ಯಮ, ಉದ್ಯೋಗಾವಕಾಶ ಹಾಗೂ ಯುವಕರ ಗಾಲ್ಫ್ ತರಬೇತಿಗೆ ಹೊಸ ಚೈತನ್ಯ ನೀಡಲಿದೆ ಎಂದು ಮನೋಜ್ ಕುಮಾರ್ ಇದೇ ಸಂದರ್ಭದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ರಾವ್, ಸಿಎ ನಿತಿನ್ ಶೆಟ್ಟಿ, ಗೌತಮ್ ಪಡಿವಾರ್, ಹಾಗೂ ಸಿಎ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.