ಮಂಗಳೂರು: ಕಲೆ ಶಿಕ್ಷಣ ಹಾಗೂ ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶರಧಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಕಲಾಪರ್ಬ – ರಾಷ್ಟ್ರೀಯ ಕಲೋತ್ಸವ’ವು ಜನವರಿ 9, 10 ಮತ್ತು 11ರಂದು ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ.

ಕದ್ರಿಪಾರ್ಕ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಯೋಜಕರು, ಕಲಾ ಪರ್ಬದಲ್ಲಿ ೮ ರಿಂದ ೮೦ ವರ್ಷದವರೆಗೆ ಎಲ್ಲ ವಯೋಮಿತಿಯ ಕಲಾವಿದರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ಕಲಾ ಸ್ಪರ್ಧೆಗಳು, ಕಲಾ ಪ್ರದರ್ಶನಗಳು ಹಾಗೂ ಕಲಾ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದ್ದು, ಆಯ್ಕೆಯಾದ ಛಾಯಾಚಿತ್ರಗಳ ವಿಶೇಷ ಪ್ರದರ್ಶನವನ್ನು ಸಾರ್ವಜನಿಕರಿಗೆ ವೀಕ್ಷಣೆಗೆ ಒದಗಿಸಲಾಗುತ್ತದೆ.

ಕಾಸರಗೋಡು, ಕಣ್ಣೂರು, ಕೊಚ್ಚಿ, ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ, ವಿಜಯನಗರ, ಬೆಂಗಳೂರು, ಮೈಸೂರು, ಕೊಡಗು, ಹಾಸನ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಕಲಾವಿದರು ಭಾಗವಹಿಸಲಿದ್ದು, ಸುಮಾರು ೧೨೦ ಚಿತ್ರಕಲಾವಿದರ ಸ್ಪಾಲ್‌ಗಳು, 5 ಸಾವಿರಕ್ಕೂ ಅಧಿಕ ಕಲಾಕೃತಿಗಳ ಪ್ರದರ್ಶನ, ದೇಶವ್ಯಾಪಿ ಛಾಯಾಚಿತ್ರಗಾರರಿಂದ ಆಯ್ಕೆಯಾದ ನೂರಕ್ಕೂ ಮಿಕ್ಕಿ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಸುಮಾರು ೮೦೦ಕ್ಕೂ ಹೆಚ್ಚು ಶಾಲಾ ಮಕ್ಕಳ ಚಿತ್ರಕಲೆ, ರಂಗೋಲಿ ಹಾಗೂ ಮೆಹಂದಿ ಸ್ಪರ್ಧೆಗಳು ಆಯೋಜಿಸಲಾಗಿವೆ ಎಂದರು.

ಹಾಸನದ ಖ್ಯಾತ ಕಲಾವಿದ ಬಿ. ಎಸ್. ದೇಸಾಯಿ ಅವರ ಶಿಷ್ಯವೃಂದದ ಮಕ್ಕಳಿಂದ 5ಅಡಿ ಎತ್ತರ ಮತ್ತು 20 ಅಡಿ ಉದ್ದದ ಪರಿಸರ ಜಾಗೃತಿಯ ಕುರಿತ ಜಲವರ್ಣ ಪ್ರಾತ್ಯಕ್ಷಿಕೆ ಶನಿವಾರ ಸಂಜೆ 3 ಗಂಟೆಗೆ ನಡೆಯಲಿದೆ. ಪ್ರತಿದಿನ ಸಂಜೆ ನೃತ್ಯ, ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಹೇಳಿದರು.

ಕೆಪಿಟಿ, ಪದುವಾ ಗ್ರೌಂಡಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದು, ಮೂರು ದಿನಗಳ ಕಾಲ ಕದ್ರಿ ಪಾರ್ಕ್ ರೋಡ್ ಬಂದ್ ಆಗಲಿದ್ದು, ಅದರಡಿಯಲ್ಲಿಯೇ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಗಲಿದ ಖ್ಯಾತ ಚಿತ್ರಕಲಾವಿದ, ಉಪನ್ಯಾಸಕ ಸೈಯದ್ ಆಸಿಫ್ ಅಲಿ ಅವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಶರಧಿ ಪ್ರತಿಷ್ಠಾನದ ಅಧ್ಯಕ್ಷ ಕೋಟಿಪ್ರಸಾದ್ ಆಳ್ವಾ, ಕಾರ್ಯದರ್ಶಿ ಪುನಿಕ್ ಶೆಟ್ಟಿ, ಕಲಚಾವಡಿಯ ಗೌರವಾಧ್ಯಕ್ಷ ಗಣೇಶ್ ಸೋಮಯಾಜಿ, ಉಪಾಧ್ಯಕ್ಷ ಶರತ್ ಹೊಳ್ಳ, ಕಾರ್ಯದರ್ಶಿ ಡಾ. ಎಸ್. ಎಂ. ಶಿವಪ್ರಕಾಶ್, ಕೆಎಸ್‌ಆರ್‌ಟಿಸಿ ಡಿವಿಜನಲ್ ಕಂಟ್ರೋಲರ್ ರಾಜೇಶ್ ಶೆಟ್ಟಿ, ಪೊರ್ಲು ಕಾರ್ಕಳದ ಜಿನೇಶ್ ಪ್ರಸಾದ್, ಭರತ್ ರಾಜ್ ಬೈಕಾಡಿ ಉಪಸ್ಥಿತರಿದ್ದರು.