ಮಂಗಳೂರು: ಸೇವಾ ಭಾರತಿ (ರಿ) ಮಂಗಳೂರು ಘಟಕದ ಅಂಗ ಸಂಸ್ಥೆಯಾಗಿರುವ ಆಶಾ ಜ್ಯೋತಿ ವತಿಯಿಂದ ದಿವ್ಯಾಂಗರಿಗಾಗಿ ಆಯೋಜಿಸಲಾಗುವ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ–2026’ ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಸಹಭಾಗಿತ್ವದಲ್ಲಿ ಜನವರಿ 11ರಂದು ಡೊಂಗರಕೇರಿಯ ಕೆನರಾ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಶಾ ಜ್ಯೋತಿ ಅಧ್ಯಕ್ಷರಾದ ಗೀತಾ ಲಕ್ಷ್ಮೀಶ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 34 ವರ್ಷಗಳಿಂದ ಸೇವಾ ಭಾರತಿ ಮಂಗಳೂರು ದಿವ್ಯಾಂಗರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದ್ದು, 1998ರಲ್ಲಿ ಆರಂಭಗೊಂಡ ಆಶಾ ಜ್ಯೋತಿ ದಿವ್ಯಾಂಗರು ಹಾಗೂ ಅವರ ಪೋಷಕರಿಗಾಗಿ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ದಿವ್ಯಾಂಗರಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ ಬೆಳೆಸುವುದು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಪೋಷಕರಲ್ಲಿರುವ ಅಸಹಾಯಕತೆಯ ಭಾವನೆ ದೂರ ಮಾಡಿ ವಿಶ್ವಾಸ ತುಂಬುವುದು, ಅಂಗವಿಕಲ ಗುರುತಿನ ಚೀಟಿ, ವೈದ್ಯಕೀಯ ತಪಾಸಣಾ ಶಿಬಿರ, ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಆಶಾ ಜ್ಯೋತಿ ನಿರಂತರವಾಗಿ ನಡೆಸುತ್ತಿದೆ ಎಂದು ಅವರು ವಿವರಿಸಿದರು.
ಜನವರಿ 11ರಂದು ಬೆಳಿಗ್ಗೆ 9.30 ಗಂಟೆಗೆ ಸಭಾಕಾರ್ಯಕ್ರಮ ಆರಂಭವಾಗಲಿದ್ದು, ಮೇಳದ ಉದ್ಘಾಟನೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ತೇಜಸ್ವಿನಿ ಆಸ್ಪತ್ರೆಯ ಸ್ಥಾಪಕರಾದ ಪ್ರೊ. ಡಾ. ಶಾಂತರಾಮ್ ಶೆಣೈ ನೆರವೇರಿಸಲಿದ್ದಾರೆ. ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಎಸ್. ಭಟ್ ಹಾಗೂ ಎಂಆರ್‌ಪಿಎಲ್‌ನ ಸಮೂಹ ಮಹಾಪ್ರಬಂಧಕ ಕೃಷ್ಣ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮನರಂಜನೆ, ಆಟೋಟ, ಕುದುರೆ ಸವಾರಿ
ಮೇಳದಲ್ಲಿ ದಿವ್ಯಾಂಗರು ಹಾಡು, ನೃತ್ಯ, ವಿವಿಧ ಸ್ಪರ್ಧೆಗಳು, ಆಟೋಟ, ಕುದುರೆ ಸವಾರಿ ಸೇರಿದಂತೆ ಅನೇಕ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಪೋಷಕರನ್ನೂ ಸೇರಿಸಿಕೊಂಡು ಸ್ಪರ್ಧೆಗಳು ನಡೆಯಲಿದ್ದು, ಮೇಳದ ಎಲ್ಲ ವ್ಯವಸ್ಥೆಗಳು ದಿವ್ಯಾಂಗರಿಗೆ ಸಂಪೂರ್ಣ ಉಚಿತವಾಗಿರುತ್ತವೆ ಎಂದು ಗೀತಾ ಲಕ್ಷ್ಮೀಶ್ ಹೇಳಿದರು.
ಆರಂಭಿಕ ವರ್ಷಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ದಿವ್ಯಾಂಗರು ಭಾಗವಹಿಸಿದ್ದರೆ, ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಮಂದಿ ಈ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ದಿವ್ಯಾಂಗ ಮಕ್ಕಳು, ಅವರ ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ ಮನರಂಜನೆಯಲ್ಲಿ ಭಾಗವಹಿಸಲು ಪೂರಕ ವಾತಾವರಣ ನಿರ್ಮಿಸುವುದೇ ಮೇಳದ ಮುಖ್ಯ ಉದ್ದೇಶವಾಗಿದೆ ಎಂದರು.

ಕಾನೂನು ಪೋಷಕತ್ವ ಪ್ರಮಾಣ ಪತ್ರ ಮಾಹಿತಿ
ಈ ಬಾರಿಯ ಮೇಳದಲ್ಲಿ 18 ವರ್ಷ ಮೇಲ್ಪಟ್ಟ ಸ್ವಲೀನತೆ (Autism), ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ದಿವ್ಯಾಂಗರಿಗೆ ಕಾನೂನುಬದ್ಧ ಪೋಷಕತ್ವ ಪ್ರಮಾಣ ಪತ್ರ (Legal Guardianship Certificate) ಹಾಗೂ ವಿರಾಮಯ ಆರೋಗ್ಯ ಕಾರ್ಡ್ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು. ಅದೇ ರೀತಿ ಸಕ್ಷಮ ಸಂಸ್ಥೆಯ ವತಿಯಿಂದ ದಿವ್ಯಾಂಗರ ಸಬಲೀಕರಣ, ಹಾಗೂ ನೇತ್ರದಾನ ಕುರಿತು ಜಾಗೃತಿ ಮಾಹಿತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ 7 ಮಂದಿ ವಿಶೇಷ ಸಾಧನೆ ಮಾಡಿದ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಪ್ರವಾಸ ಕಾರ್ಯಕ್ರಮ
ಡಿಸೆಂಬರ್ 21, 2025ರಂದು ಆಶಾ ಜ್ಯೋತಿ ವತಿಯಿಂದ ದಿವ್ಯಾಂಗರು ಹಾಗೂ ಅವರ ಪೋಷಕರಿಗಾಗಿ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ಮತ್ತು ಮೊಂಟೆಪದವಿನ ಮಾಧವ ವನ ಕ್ಯಾಂಪಸ್ಗೆ ಪ್ರವಾಸ ಆಯೋಜಿಸಲಾಗಿದ್ದು, ಇದರಲ್ಲಿ 190 ಮಂದಿ ದಿವ್ಯಾಂಗರು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಆಶಾ ಜ್ಯೋತಿಯ ಗೌರವಾಧ್ಯಕ್ಷ ಡಾ. ವಿ. ಮುರಳೀಧರ ನಾಯಕ್, ಜೊತೆ ಕಾರ್ಯದರ್ಶಿ ಗಣರಾಜ ವೈ. ಖಜಾಂಚಿ ಕೆ. ವಿಶ್ವನಾಥ ಪೈ, ಜೊತೆ ಕಾರ್ಯದರ್ಶಿ ಫಣೀಂದ್ರ, ಸೇವಾ ಭಾರತಿ (ರಿ) ಮಂಗಳೂರು ಗೌರವ ಕಾರ್ಯದರ್ಶಿ ಹೆಚ್. ನಾಗರಾಜ ಭಟ್ ಹಾಗೂ
ಖಜಾಂಚಿ ಪಿ. ವಿನೋದ್ ಶೆಣೈ ಉಪಸ್ಥಿತರಿದ್ದರು.