ಕಾರ್ಕಳ: ‘ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ ದಫ್‌ನಂತಹ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿದ ಕೂಡಲೆ ಸೌಹಾರ್ದ ಬೆಳೆಯಲ್ಲ, ಇದರಿಂದ ಹಿಂದುಗಳಿಗೆ ನಂಬಿಕೆ ಏನು ನಿಮ್ಮ ಮೇಲೆ ಹೆಚ್ಚಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ಅಂಬಡೆಕಲ್ಲು ನಿವಾಸಿ ಸುಧಾಕರ(37) ಬಂಧಿತ ಆರೋಪಿ. ನಿಟ್ಟೆಯ ಸುದೀಪ್ ಶೆಟ್ಟಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಬಾರಿಯ ಶಿರೂರು ಮಠದ ಪರ್ಯಾಯ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆ ಅರ್ಪಿಸುವ ಸಂಬಂಧ ರಚಿಸಲಾದ ಉಡುಪಿ ಜಿಲ್ಲಾ ಮುಸ್ಲಿಮ್ ಸೌಹಾರ್ದ ಪರ್ಯಾಯ ಸಮಿತಿ ಬಗ್ಗೆ ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಬರಹಗಳನ್ನು ಬೆರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾಗಿ ಆರೋಪಿಸಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.
