ಮಂಗಳೂರು: “ದೇಶದ ಅತ್ಯಂತ ವೈವಿಧ್ಯಮಯ ಕ್ರೀಡಾ, ಅಥ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲೊಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯಾಥ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ ಜನವರಿ 9ರಿಂದ ಜನವರಿ 11ರವರೆಗೆ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಮಂಗಳೂರು ಟ್ರಯಾಥ್ಲಾನ್ ಮತ್ತು ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ 2026 ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ. ಈ ಬಾರಿ ದೇಶ ವಿದೇಶಗಳಿಂದ 5000ಕ್ಕಿಂತ ಹೆಚ್ಚು ಅಥ್ಲೀಟ್ ಗಳ ಆಗಮನ ನಿರೀಕ್ಷಿಸಲಾಗಿದೆ. ಭಾರತೀಯ ಸೈನ್ಯದ 150ಕ್ಕೂ ಹೆಚ್ಚು ಅಥ್ಲೀಟ್ ಗಳು ಪಾಲ್ಗೊಳ್ಳಲಿದ್ದು ನೌಕಾದಳದ ಒಂದು ಸ್ಟಾಲ್ ತೆರೆದು ಅದರ ಮೂಲಕ ಮಕ್ಕಳಿಗೆ ದೇಶದ ನೌಕಾದಳದ ಕುರಿತು ಮಾಹಿತಿ ಮತ್ತು ಸೈನ್ಯಕ್ಕೆ ಸೇರಲು ಉತ್ತೇಜಿಸಲಾಗುವುದು. ಮಕ್ಕಳು ಮತ್ತವರ ಪೋಷಕರು ಮೂರು ದಿನಗಳ ಕಾಲ ನಡೆಯಲಿರುವ ಈ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳುವ ಮೂಲಕ ಆಟೋಟ ಸ್ಪರ್ಧೆಗಳ ಜೊತೆಗೆ ಶಿಕ್ಷಣ ಪಡೆಯಲು ಹೆಚ್ಚಿನ ಮಹತ್ವ ನೀಡಲಾಗಿದೆ. ಅಲ್ ಕಾರ್ಗೋ ಇಮರ್ಜ್ ಸ್ಟಾರ್ಟಪ್ ಕಾಂಕ್ಲೇವ್ ಸ್ಟಾರ್ಟಪ್‌ಗಳ ನೂತನ ಉತ್ಪನ್ನಗಳನ್ನು ಮಾರ್ಗದರ್ಶನ ಮಾಡಿ, ಅವುಗಳನ್ನು ವಿಸ್ತರಿಸಲು ಬಂಡವಾಳಶಾಹಿಗಳನ್ನು ಆಹ್ವಾನಿಸುವ ವಿಶಿಷ್ಟ ವೇದಿಕೆಯಾಗಿದೆ ಎಂದರು.

ಬಳಿಕ ಮಾತಾಡಿದ ಆಯೋಜಕರಲ್ಲಿ ಒಬ್ಬರಾದ ನವೀನ್ ಹೆಗ್ಡೆ ಅವರು, “ಜ.9ರ ಸಂಜೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು ಜ.10ರಂದು ಸೈಕ್ಲಿಂಗ್ ಮತ್ತು ಡುಯೆತ್ಲಾನ್ ಹಾಗೂ ಜ.11ರಂದು ರನ್ನಿಂಗ್, ಸ್ವಿಮ್ಮಿಂಗ್ ಮತ್ತು ಸೈಕ್ಲಿಂಗ್ ಟ್ರಯಾಥ್ಲಾನ್ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬೀಚ್ ಕುಸ್ತಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಭಾವಂತ ಯುವಕರಿಗೆ ರಾಷ್ಟ್ರೀಯ ಮಟ್ಟದ ತಂಡಗಳಲ್ಲಿ ಅವಕಾಶ, ಮತ್ತು ಸರ್ಕಾರದ ಉದ್ಯೋಗಗಳಿಗೆ ಅರ್ಹತಾ ಸಾಧ್ಯತೆಯನ್ನು ಹೆಚ್ಚಿಸಲಿದೆ. ಅದೇ ರೀತಿ ವಿಜ್ಞಾನ – ಕಲೆ ಪ್ರದರ್ಶನ – ಐಟಿ ಕ್ವಿಜ್ ಮಕ್ಕಳಿಗಾಗಿ ಆಯೋಜಿಸಲಾಗಿದೆ. ಮಂಗಳೂರು ಬೀಚ್ ಮ್ಯಾರಥಾನ್ ಓಟವನ್ನು ಬೀಚ್ ನಲ್ಲಿ ನಡೆಸಲಾಗುತ್ತದೆ” ಎಂದರು.

“ಈ ಕಾರ್ಯಕ್ರಮದ ಮೂಲಕ ಶೇ 100ರಷ್ಟು ಕ್ಯಾನ್ಸರ್ ಪ್ಯಾಲಿಯೇಟಿವ್ ಕೇರ್ ಗೆ ಸಹಾಯ ಸಲ್ಲಿಸಲಾಗುವುದು. ಸಂಗ್ರಹವಾಗುವ ಪ್ರತಿಯೊಂದು ರೂಪಾಯಿಯೂ ತಪಸ್ಯ ಫೌಂಡೇಶನ್ ನ ಅಂತಿಮ ಹಂತದ ಕ್ಯಾನ್ಸರ್ ರೋಗಿಗಳ ಉಚಿತ ಆರೈಕೆಗಾಗಿ ಬಳಸಲಾಗುತ್ತದೆ. ಇಷ್ಟೇ ಅಲ್ಲದೆ ಭವಿಷ್ಯದ ಒಲಿಂಪಿಯನ್ನರನ್ನು ರೂಪಿಸುವುದು, 10–15 ವರ್ಷ ವಯಸ್ಸಿನ 40 ಮಕ್ಕಳಿಗೆ ಟ್ರಯಾಥ್ಲಾನ್ ತರಬೇತಿ ನೀಡಲಾಗುತ್ತಿದೆ. ಸ್ಟಾರ್ಟಪ್ ಗಳಿಗೆ ಬೆಂಬಲ ನೀಡುವ ಮೂಲಕ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿರುವ ಸ್ಟಾರ್ಟಪ್‌ಗಳಿಗೆ ಮಾರ್ಗದರ್ಶನ ಮತ್ತು ವೇದಿಕೆ ಕಲ್ಪಿಸಲಾಗುತ್ತದೆ. ಮಂಗಳೂರನ್ನು ಜಾಗತಿಕ ಪ್ರವಾಸೋದ್ಯಮ ನಕ್ಷೆಗೆ ಸೇರಿಸುವ ಮೂಲಕ ಮಂಗಳೂರಿನ ಸೌಂದರ್ಯ, ಸಂಸ್ಕೃತಿ ಮತ್ತು ಆತಿಥ್ಯವನ್ನು ವಿಶ್ವಕ್ಕೆ ಪರಿಚಯಿಸುವುದು ಇದರ ಉದ್ದೇಶವಾಗಿದೆ” ಎಂದರು.
ಡುಯಾಥ್ಲಾನ್, 40K ಡ್ರೀಮ್ ಸೈಕ್ಲಿಂಗ್, ಒಲಿಂಪಿಕ್ ಡಿಸ್ಟನ್ಸ್ ಟ್ರಯಾಥ್ಲಾನ್, ಸ್ಪ್ರಿಂಟ್ ಟ್ರಯಾಥ್ಲಾನ್, ಟೀಮ್ ರಿಲೇ ಟ್ರಯಾಥ್ಲಾನ್, 1000 ಮೀ. ಡ್ರೀಮ್ ಸ್ವಿಮ್, 500 ಮೀ. ಫನ್ ಸ್ವಿಮ್, ಅಕ್ವಾಥ್ಲಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10K ಡ್ರೀಮ್ ರನ್, 5K ಫನ್ ರನ್ ಜೊತೆಗೆ SFI ನ್ಯಾಷನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್, ಅಗ್ರಿ ಟೆಕ್ ಎಕ್ಸ್‌ಪೋ (20–30 ಸ್ಟಾಲ್ ಮತ್ತು ಕಾನ್ಫರೆನ್ಸ್), ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಬೈಕ್ ಸ್ಟಂಟ್ ಶೋ, ನೃತ್ಯಾಂತಾರ 2026 – ನೃತ್ಯ ಸ್ಪರ್ಧೆ, ಕಲೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಷನ್ ಶೋ, ಸ್ವರದಿ ಲೈವ್ ಕಾರ್ಯಕ್ರಮ (ವ್ಯಾಲೆಡಿಕ್ಟರಿ ಆಕ್ಟ್), ಥ್ರೋಬಾಲ್ ಪಂದ್ಯಾಟವನ್ನೂ ಆಯೋಜಿಸಲಾಗಿದೆ.
ಕ್ರೀಡಾ ಸ್ಪರ್ಧೆಗಳು, ಸ್ಟಾರ್ಟಪ್ ಇಮರ್ಜ್ ಮತ್ತು ಸ್ವಯಂಸೇವಕರಿಗಾಗಿ ನೊಂದಣಿಗಾಗಿ mangalurutriathlon.com ಗೆ ಭೇಟಿ ನೀಡಬಹುದು ಅಥವಾ
ನವೀನ್ ಹೆಗ್ಡೆ: 9324051848, ಅರವಿಂದ್ ಕುಮಾರ್: 9844468159 ಅವರನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ರಿತೇಶ್, ಮುಹಮ್ಮದ್, ನಿತ್ಯಾನಂದ ಶೆಟ್ಟಿ, ಅರವಿಂದ್, ಕರುಣಾಕರ ಮತ್ತಿತರರು ಉಪಸ್ಥಿತರಿದ್ದರು.