
ವಾರಣಾಸಿ: ಆಟವಾಡುತ್ತಾ ಅರಿಯದೇ ವಿಷಕಾರಿ ಹಣ್ಣು ಸೇವಿಸಿದ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಭಾನುವಾರ(ಜ.4) ಉತ್ತರ ಪ್ರದೇಶದ ವಾರಣಾಸಿ ಸಮೀಪದ ಕರ್ಧನಾ ಎಂಬಲ್ಲಿ ಸಂಭವಿಸಿದೆ.
ಮೃತಪಟ್ಟ ಮಕ್ಕಳು 3 ರಿಂದ 6 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.
ಗ್ರಾಮದ ಹೊರವಲಯದಲ್ಲಿ ಮಕ್ಕಳ ಗುಂಪೊಂದು ಆಟವಾಡುತ್ತಿದ್ದ ವೇಳೆ ಅಲ್ಲಿನ “ಕನೇರ್”(Oleander) ಎಂಬ ಗಿಡದಲ್ಲಿದ್ದ ಹಣ್ಣುಗಳನ್ನು ಮಕ್ಕಳು ಅರಿಯದೇ ತಿಂದಿದ್ದಾರೆ. ಹಣ್ಣು ಸೇವಿಸಿದ ಕೆಲವೇ ಹೊತ್ತಿನಲ್ಲಿ ಮಕ್ಕಳ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದು, ವಿಷದ ಪ್ರಭಾವದಿಂದ ಇಬ್ಬರು ಮಕ್ಕಳು ಭಾನುವಾರವೇ ಕೊನೆಯುಸಿರೆಳೆದಿದ್ದಾರೆ.


ಆಘಾತಕ್ಕೊಳಗಾದ ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ ಮಕ್ಕಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಮೂರನೇ ಮಗು ಸೋಮವಾರ(ಜ.5) ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಗೋಮತಿ ವಲಯದ ಡಿಸಿಪಿ ಆಕಾಶ್ ಪಟೇಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಕ್ಕಳು ಆಟವಾಡುವಾಗ ಕನೇರ್ ಗಿಡದ ವಿಷಕಾರಿ ಹಣ್ಣನ್ನು ಸೇವಿಸಿರುವುದು ಸಾವಿಗೆ ಕಾರಣವಾಗಿದೆ. ಉಳಿದ ಮಕ್ಕಳು ಹಣ್ಣು ತಿಂದಿಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಕನೇರ್ ಅಥವಾ ಕೆಂಪು ಕಣಗಿಲೆ ಗಿಡದ ಹಣ್ಣು ಮತ್ತು ಎಲೆಗಳು ತೀವ್ರ ವಿಷಕಾರಿ ಅಂಶವನ್ನು ಹೊಂದಿರುತ್ತವೆ. ಇವುಗಳನ್ನು ಸೇವಿಸುವುದು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.