ವಜ್ರದೇಹಿ ಶ್ರೀಗಳ ಕನಸು ನನಸಾಗಿಸಲು ಭಕ್ತರು ಕೈಜೋಡಿಸಬೇಕು: ಶಾಸಕ ಭರತ್ ಶೆಟ್ಟಿ


ಮಂಗಳೂರು: ವಜ್ರದೇಹಿ ಮಠದ ಶ್ರೀಪಾದರು ಹಿಂದೂ ಸಮಾಜ ಹಾಗೂ ಸಂಸ್ಕೃತಿಯ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತೀಕ್ಷ್ಣ ಮಾತುಗಳು ಮತ್ತು ಹಿಂದುತ್ವ ಪ್ರತಿಪಾದನೆಯ ಕಾರಣದಿಂದ ಹಲವು ಸರ್ಕಾರಗಳು ಅವರನ್ನು ದೂರ ಇಟ್ಟ ಪರಿಣಾಮ, ಸರ್ಕಾರದಿಂದ ಅಗತ್ಯ ನೆರವು ಸಿಗದೇ ಶ್ರದ್ಧಾಕೇಂದ್ರ ನಿರ್ಮಿಸುವ ಅವರ ಕನಸು ಇನ್ನೂ ನನಸಾಗಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು, ಭಕ್ತರೆಲ್ಲರೂ ಒಗ್ಗಟ್ಟಾಗಿ ಅವರ ಕನಸು ನನಸಾಗಿಸಿ, ಅವರ ಹಿಂದುತ್ವದ ಕಾರ್ಯಗಳಿಗೆ ಬೆಂಬಲ ನೀಡಬೇಕು ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.

ಅವರು ಗುರುಪುರ ವಜ್ರದೇಹಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಹಿಂದೂ ಸಮಾಜ ಸುದೃಢವಾಗಬೇಕು, ಹಿಂದೂ ಸಮುದಾಯದಲ್ಲಿ ಒಗ್ಗಟ್ಟು ಬೆಳೆಬೇಕು ಮತ್ತು ದೇಶರಕ್ಷಣೆ ಎಂಬ ಮಹತ್ತರ ಉದ್ದೇಶದೊಂದಿಗೆ ದೇವರ ಕಾರ್ಯವನ್ನು ಮಾಡಲಾಗುತ್ತಿದೆ. ಮಠ ಸ್ಥಾಪನೆಯಾಗಿ ಇಂದಿಗೆ 25 ವರ್ಷಗಳು ಪೂರೈಸಿದ್ದು, ಈವರೆಗೆ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆದಿವೆ. ಭಕ್ತರ ತಂಡ ಸದಾ ನಮ್ಮೊಂದಿಗೆ ಇದ್ದು, ಮುಂದಿನ ದಿನಗಳಲ್ಲಿಯೂ ದೇವಸ್ಥಾನ ನಿರ್ಮಾಣ ಸೇರಿದಂತೆ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ಸಾಗುತ್ತವೆ ಎಂಬ ವಿಶ್ವಾಸವಿದೆ ಎಂದರು.

 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವಾ ಮಾತನಾಡಿ, ಇಂದಿನ ಜಗತ್ತಿನಲ್ಲಿ ಧಾರ್ಮಿಕ ಪ್ರಜ್ಞೆ ಕ್ಷೀಣಿಸುತ್ತಿದ್ದರೂ ಭಾರತೀಯರು ಅದನ್ನು ಉಳಿಸಿಕೊಂಡಿದ್ದಾರೆ. ವಜ್ರದೇಹಿ ಶ್ರೀಗಳು ತಮ್ಮ ವೈಯಕ್ತಿಕ ಬದುಕನ್ನು ತ್ಯಜಿಸಿ ಮಠ ನಿರ್ಮಿಸಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಅವರ ಕ್ಷೇತ್ರ ಇನ್ನಷ್ಟು ಬೆಳಗಬೇಕು, ದೇಗುಲ ನಿರ್ಮಾಣವಾಗಬೇಕು. ಈ ಕಾರ್ಯಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.


ಬರೋಡಾ ಶಶಿಧರ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ವಾಮೀಜಿಗಳು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ದೇವಸ್ಥಾನ ನಿರ್ಮಾಣದ ಸಂಕಲ್ಪ ಶೀಘ್ರದಲ್ಲೇ ದೇವರ ಅನುಗ್ರಹದಿಂದ ಸಾಕಾರಗೊಳ್ಳಲಿ ಎಂದು ಹಾರೈಸಿದರು.


ವೇದಮೂರ್ತಿ ಪ್ರಜ್ವಲ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಗಳ ಕನಸು ಶೀಘ್ರದಲ್ಲಿ ನನಸಾಗಲಿ ಎಂದು ಆಶಿಸಿದರು. ಕಳೆದ 25 ವರ್ಷಗಳಿಂದ ಗುರು ರಾಮಾಂಜನೇಯ, ಅಭಯ ನರಸಿಂಹ, ನಾಗದೇವರು, ಧರ್ಮ ದೈವಗಳು ಹಾಗೂ ಮೈಸಂದಾಯ ದೈವಗಳ ಮೂಲಕ ವಜ್ರದೇಹಿ ಮಠ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿತೇಂದ್ರ ಕೊಟ್ಟಾರಿ, ಭರತ್ ರಾವ್, ಎಂ.ಬಿ. ಉಮೇಶ್ ಶೆಟ್ಟಿ, ಚಂದ್ರಕಾಂತ್ ಸಂಗನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಜಾತ್ರೆಯ ಅಂಗವಾಗಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೂಡ ಆಯೋಜಿಸಲಾಗಿತ್ತು.

error: Content is protected !!