ಕಾರ್ಕಳ: ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ನಡೆದ ಕಳ್ಳತನ ಪ್ರಕರಣ ಇದೀಗ ತೀವ್ರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಥೀಂ ಪಾರ್ಕ್‌ನ ಬಾಗಿಲು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಕಳ್ಳತನ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, “ಇದು ಕಾರ್ಕಳದ ಇತಿಹಾಸದಲ್ಲೇ ದುರ್ದಿನ. ಕಾರ್ಕಳವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸುವ ಕನಸಿನೊಂದಿಗೆ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ, ಸ್ಥಳೀಯ ಕಾಂಗ್ರೆಸ್ ನಾಯಕರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿದೆ. ಕಳೆದ ಎರಡು ವರ್ಷಗಳಿಂದ ಯೋಜನೆಗೆ ಅನುದಾನ ಬಿಡುಗಡೆಯಾಗದಂತೆ ಮಾಡಿ ಥೀಂ ಪಾರ್ಕ್ ಅನ್ನು ಪಾಳುಬಿಡಲಾಗಿದೆ. ಪರಿಣಾಮ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿಯವರ ವಿರುದ್ಧ ಕಿಡಿಕಾರಿದ ಅವರು, “ಮುಂದಿನ ಚುನಾವಣೆಯವರೆಗೂ ಈ ಯೋಜನೆಯನ್ನು ಜೀವಂತವಾಗಿರಿಸದಂತೆ ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ನೀಡಲಾಗಿದೆ. ಘಜ್ನಿ, ಘೋರಿಗಳು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಇಂದು ಥೀಂ ಪಾರ್ಕ್‌ನಲ್ಲೂ ನಡೆಯುತ್ತಿದೆ” ಎಂದು ಟೀಕಿಸಿದರು.
ಇದೇ ವೇಳೆ ಜಿಲ್ಲಾಡಳಿತದ ವೈಫಲ್ಯವನ್ನೂ ಉಲ್ಲೇಖಿಸಿದ ಶಾಸಕ ಸುನಿಲ್ ಕುಮಾರ್, “ಸೆಪ್ಟೆಂಬರ್ 2023ರಲ್ಲಿ ಥೀಂ ಪಾರ್ಕ್‌ಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವ ಆದೇಶ ಇದ್ದರೂ, ಕೆಲವರು ಕಾನೂನುಬಾಹಿರವಾಗಿ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದಾರೆ. ಈ ಹಿನ್ನೆಲೆ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸಿ, ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು” ಎಂದು ಆಗ್ರಹಿಸಿದರು. “ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸುವುದಿಲ್ಲ” ಎಂದರು.

ಸುನಿಲ್‌ಗೆ ಮುನಿಯಾಲು ತಿರುಗೇಟು
ಇದಕ್ಕೆ ತಿರುಗೇಟು ನೀಡಿರುವ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು, “ಪರಶುರಾಮ ಥೀಂ ಪಾರ್ಕ್‌ನಲ್ಲಿ ಇದು ಎರಡನೇ ಬಾರಿ ನಡೆದ ಕಳ್ಳತನ. ಮೊದಲನೇ ಬಾರಿ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗ ಕಳ್ಳತನವಾಗಿದ್ದು, ಅದೇ ಮುಂದಿನ ಕಳ್ಳತನಗಳಿಗೆ ಪ್ರೇರಣೆಯಾಗಿದೆ” ಎಂದು ಆರೋಪಿಸಿದರು.
“ಕೋಟ್ಯಾಂತರ ರೂಪಾಯಿ ಸರ್ಕಾರಿ ಅನುದಾನ ಬಳಸಿಕೊಂಡು ಕಂಚಿನ ಪ್ರತಿಮೆಯ ಬದಲು ಫೈಬರ್ ಮಿಶ್ರಿತ ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆಯ ಸೊಂಟದ ಮೇಲಿನ ಭಾಗ ಕಳ್ಳತನವಾದಾಗ ಶಾಸಕ ಸುನೀಲ್ ಕುಮಾರ್ ಮೌನ ವಹಿಸಿದ್ದರು. ಇದು ಅವರ ನಿರ್ದೇಶನದಂತೆ ನಡೆದಿದ್ದರಿಂದಲೇ ಮೌನವಾಗಿದ್ದರು ಎಂದುಕೊಳ್ಳಬೇಕಾಗುತ್ತದೆ” ಎಂದು ಉದಯ ಶೆಟ್ಟಿ ಆರೋಪಿಸಿದರು.
“ಯೋಜನೆಯ ಆರಂಭದಲ್ಲೇ ಪ್ರಾಮಾಣಿಕತೆ ಇದ್ದಿದ್ದರೆ ಇಂದು ಇಂತಹ ದುರ್ಗತಿ ಬರುತ್ತಿರಲಿಲ್ಲ. ಜನರನ್ನು, ಸರ್ಕಾರವನ್ನು, ಧಾರ್ಮಿಕ ನಂಬಿಕೆಯನ್ನು ಮೋಸ ಮಾಡಿದ ಪರಿಣಾಮವೇ ಇಂದು ಥೀಂ ಪಾರ್ಕ್ ಕಳ್ಳರ ಆವಾಸವಾಗಿದೆ. ಕಾರ್ಕಳದ ಜನತೆಯ ಕನಸಿನ ಪ್ರವಾಸಿ ತಾಣ ನಾಶವಾಗಲು ನೇರ ಹೊಣೆಗಾರರು ಶಾಸಕ ಸುನೀಲ್ ಕುಮಾರ್. ಅವರು ತಕ್ಷಣ ಜನತೆಯ ಕ್ಷಮೆ ಯಾಚಿಸಬೇಕು” ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ, ಸರ್ಕಾರದ ಸ್ವತ್ತಿಗೆ ಸೂಕ್ತ ಭದ್ರತೆ ಒದಗಿಸಿ, ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಇಲಾಖೆಗೆ ಉದಯ ಶೆಟ್ಟಿ ಆಗ್ರಹಿಸಿದ್ದಾರೆ.