ಸುಳ್ಯ: ತಾಯಿ ಮತ್ತು ಮೂರು ವರ್ಷದ ಮಗುವಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ಭಾನುವಾರ(ಜ.4) ನಡೆದಿದೆ.

ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತಪಟ್ಟವರು.

ಮಧುಶ್ರೀ ಅವರು ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಮಲಗಿದ್ದ ತಾಯಿ, ಮಗು ಭಾನುವಾರ ಬೆಳಗ್ಗೆ ಕಾಣದೇ ಇದ್ದುದರಿಂದ ಹುಡುಕಾಟ ನಡೆಸಿದಾಗ ಮನೆ ಸಮೀಪದ ಮತ್ತೋರ್ವರ ಜಾಗದ ಕೆರೆಯಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮಧುಶ್ರೀ ಅವರು ಮಗುವನ್ನು ಬಟ್ಟೆಯಲ್ಲಿ ತನ್ನ ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2026 ಅನ್ನು ಕಲಂ 103, BNS–2023 ಪ್ರಕರಣ ದಾಖಲಾಗಿದೆ.
ಅಲ್ಲದೆ ತಾಯಿ ರತ್ವಾವತಿ(55) ಮಗಳ ಸಾವಿನಲ್ಲಿ ಸಂಶಯವಿದೆ ಎಂದು ಆರೋಪಿಸಿ ಜ.4ರಂದು ಬೆಳ್ಳಾರೆ ಪೊಲೀಸ್ ಠಾಣೆ ದೂರು ನೀಡಿದ್ದು, ಯು.ಡಿ.ಆರ್. ಸಂಖ್ಯೆ 01/2026 ಅನ್ನು ಕಲಂ 194(3)(i)(iv), BNSS–2023ರಡಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ.
ಈ ಘಟನೆಯ ಸಂಬಂಧ ಮೇಲ್ಕಂಡ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.