ಮಂಗಳೂರು: ಗರೋಡಿ ಜಾತ್ರೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕೋಳಿ ಕಾಳಗಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕಾರ್ಯಕ್ರಮವನ್ನು ಬಲವಂತವಾಗಿ ತಡೆದಿಲ್ಲ ಹಾಗೂ ಈ ಸಂಬಂಧ ಯಾವುದೇ ಪ್ರಕರಣವೂ ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ, ಕೋಳಿ ಕಾಳಗದ ಹೆಸರಿನಲ್ಲಿ ಯಾವುದೇ ರೀತಿಯ ಜೂಜಾಟ ನಡೆಯಬಾರದು ಎಂಬುವುದನ್ನು ಸಂಘಟಕರಿಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ಜೂಜಾಟಕ್ಕೆ ಅವಕಾಶ ನೀಡುವ ಯಾವುದೇ ಚಟುವಟಿಕೆಗಳಿಗೆ ಕಾನೂನಿನಡಿ ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿತ್ತು. ಜೂಜಾಟ ನಡೆಸಿದರೆ ಅಥವಾ ಹಣ ಸಂಗ್ರಹ ಮಾಡಿದರೆ, ಸಂಬಂಧಿಸಿದ ಸಂಘಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎಂದರು.

ಆದರೆ, ಇದು ಸಂಪ್ರದಾಯದ ಭಾಗವೆಂದು ಸಂಘಟಕರು ತಿಳಿಸಿದ ಹಿನ್ನೆಲೆಯಲ್ಲಿ ಹಾಗೂ ಯಾವುದೇ ರೀತಿಯ ಜೂಜಾಟ, ಹಣ ವಹಿವಾಟು ಅಥವಾ ಹಣ ಸಂಗ್ರಹ ನಡೆಯುವುದಿಲ್ಲ ಎಂದು ಬಾಂಡ್ ನೀಡಲು ಸಿದ್ಧತೆ ನಡೆಸಿದ ಕಾರಣ, ನಿಕಟ ಪೊಲೀಸ್ ಮೇಲ್ವಿಚಾರಣೆಯೊಂದಿಗೆ ಸೀಮಿತ ಅವಧಿಗೆ ಮಾತ್ರ ಅಂಕಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಸಮಯದಲ್ಲಾದರೂ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ, ಸಂಬಂಧಿಸಿದವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವ ಹಕ್ಕನ್ನು ಪೊಲೀಸರು ಕಾಯ್ದಿರಿಸಿಕೊಂಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.


