ಮಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಓಡಿಶಾದಿಂದ ತರಲಾಗಿದ್ದ ಸುಮಾರು 21 ಕೆ.ಜಿ. 450 ಗ್ರಾಂ ಗಾಂಜಾವನ್ನು ಸುರತ್ಕಲ್ ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ಹೊರವಲಯದ ಉಳಾಯಿಬೆಟ್ಟು ಗ್ರಾಮದ ಶಾಲೆಮಜಲು, ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಹಿಂಬದಿ, ಎಸ್.ಎ.ಎಂ. ಕ್ಲಬ್ ಸಮೀಪದ ಪ್ರಸ್ತುತ ಚೊಕ್ಕಬೆಟ್ಟು ಪರಮೇಶ್ವರಿ ನಗರ 2ನೇ ಕ್ರಾಸ್‌ನ ‘ಬೆನಕ’ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪ್ರದೀಪ್ ಪೂಜಾರಿ (32) ಹಾಗೂ ಚಿತ್ರಾಪುರದ ಫಿಶರೀಸ್ ಶಾಲೆ ಸಮೀಪದ ಮನೆ ನಂ. 6-53ರ ನಿವಾಸಿ ವಸಂತ (42) ಎಂದು ಗುರುತಿಸಲಾಗಿದೆ.

ದಿನಾಂಕ 03-01-2026ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ 2ನೇ ಕ್ರಾಸ್‌ನಲ್ಲಿರುವ “ಬೆನಕ” ಎಂಬ ಮನೆಯ ಬಳಿ ಕಾರಿನಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಈ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 21 ಕೆ.ಜಿ. 450 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ.10,72,500), ಮೂರು ಮೊಬೈಲ್‌ಫೋನ್‌ಗಳು, ಗಾಂಜಾ ಸಾಗಣೆಗೆ ಬಳಸಿದ ಕೆಎ–04 ಎಂಡಿ–2532 ಸಂಖ್ಯೆಯ ಸ್ವಿಫ್ಟ್ ಕಾರು, ಮೂರು ಲಗೇಜ್ ಬ್ಯಾಗ್‌ಗಳು, ಗಾಂಜಾ ಸೇವನೆಗೆ ಬಳಸುವ ಸ್ಟ್ರೀಫ್ಸ್‌ಗಳು ಹಾಗೂ ನಗದು ಹಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ.13,86,500 ಆಗಿದೆ.

ಆರೋಪಿಗಳು ದಿನಾಂಕ 29-12-2025ರಂದು ಓಡಿಶಾದಿಂದ ಗಾಂಜಾವನ್ನು ತರಲಾಗಿದ್ದು, ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದರು. ಆದರೆ ನಗರದಲ್ಲಿ ಹೆಚ್ಚಿದ್ದ ಪೊಲೀಸ್ ಬಂದೋಬಸ್ತ್ ಕಾರಣದಿಂದ ಮಾರಾಟ ಸಾಧ್ಯವಾಗದೆ ಕಾರಿನಲ್ಲಿಯೇ ದಾಸ್ತಾನು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 01/2026, ಎನ್‌ಡಿಪಿಎಸ್ ಕಾಯ್ದೆ ಕಲಂ 8(C), 20(b)(ii)(C) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಂಧಿತ ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಹತ್ಯೆ ಯತ್ನ, ಗಾಂಜಾ ಪ್ರಕರಣ, ಆಯುಧ ಕಾಯ್ದೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಈ ಕಾರ್ಯಾಚರಣೆಯು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ (ಪಿಐ) ಶ್ರೀ ಪ್ರಮೋದ್ ಕುಮಾರ್, ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ರಘುನಾಯ್ಕ್, ಹಾಗೂ ಸಿಬ್ಬಂದಿ ಎಎಸ್‌ಐ ಚಂದ್ರಶೇಖರ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ರೆಜಿ ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಮತ್ತು ಕಾನ್‌ಸ್ಟೇಬಲ್‌ಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ ಹಾಗೂ ಅಂಜಿನಪ್ಪ ಪಾಲ್ಗೊಂಡಿದ್ದರು.
